ಹೈದರಾಬಾದ್: ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ತನ್ನ 18 ವರ್ಷದ ಪ್ರೇಮಿಯ ಗಂಟಲು ಸೀಳಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಜುಗಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳಿಂದ ಆರೋಪಿ ಹುಡುಗಿಯ ಹಿಂದೆ ಬಿದ್ದು ಪ್ರೀತಿಸು ಎಂದು ಕಿರುಕುಳ ನೀಡುತ್ತಿದ್ದನು. ಆದರೆ ಹುಡುಗಿ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಭಾನುವಾರ ರಾತ್ರಿ ಚಾಕುವಿನಿಂದ ಆಕೆಯ ಗಂಟಲು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಹುಡುಗಿಯನ್ನು ಕೊಂದು ಗ್ರಾಮಸ್ಥರು ಸ್ಥಳಕ್ಕೆ ಬರುವಷ್ಟರಲ್ಲಿ ಪರಾರಿಯಾಗಿದ್ದಾನೆ. ಆದರೆ ಆರೋಪಿಯ ಸ್ನೇಹಿತನನ್ನು ಸ್ಥಳೀಯರು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಆತನನ್ನು ಪಾಲಕೋಲ್ಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತ ಕೊಲೆಯಾದ ಸ್ಥಳದಲ್ಲಿ ಪರಿಶೀಲನೆ ಮಾಡುವಾಗ ಆರೋಪಿಯ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಕೊಲೆಗಾರ ಹೈದರಾಬಾದ್ ಮೂಲದವನು ಎಂದು ಪೊಲೀಸರು ಗುರುತಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.