ನವದೆಹಲಿ: 24 ವರ್ಷದ ಯುವಕನೊಬ್ಬ ಪ್ರಿಯತಮೆಗಾಗಿ ಆಕೆಯ ತಂದೆಯನ್ನೇ ಅಪಹರಿಸಿ ಅರೆಸ್ಟ್ ಆಗಿದ್ದಾನೆ.
ಸಂಜು ಬಂಧಿತ ಆರೋಪಿ. ಪೊಲೀಸರು ಸಂಜುವನ್ನು ಉತ್ತರ ಪ್ರದೇಶದ ಮಥುರಾ ಪಟ್ಟಣದಲ್ಲಿ ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗೆ ತನ್ನ ಮೂವರು ಸ್ನೇಹಿತರ ಜೊತೆ ಸಂಜು ದ್ವಾರಾಕಾದಲ್ಲಿರುವ ಅಂಗಡಿಯಿಂದ ಯುವತಿಯ ತಂದೆಯನ್ನ ಅಪಹರಿಸಿದ್ದಾನೆ. ನಂತರ ಸಂಜು ಯುವತಿಯ ತಂದೆಯನ್ನು ಕೂಡಿ ಹಾಕಿ ಮಗಳಿಗೆ ಫೋನ್ ಮಾಡಿಸಿ ‘ಸಂಜು ತುಂಬಾ ಒಳ್ಳೆಯ ಹುಡುಗ, ಆತನನ್ನು ಮದುವೆಯಾಗು’ ಎಂದು ಬಲವಂತವಾಗಿ ಹೇಳಿಸಿದ್ದಾನೆ.
ಈ ವೇಳೆ ತಂದೆ, ತನ್ನನ್ನು ಹರ್ಯಾಣದ ಸೋನಿಪತ್‍ನಲ್ಲಿ ಕೂಡಿ ಹಾಕಿರುವುದಾಗಿ ತಿಳಿಸಿದ್ದಾರೆ. ಪೊಲೀಸರು ಫೋನ್ ಕರೆ ಲೋಕೇಶನ್ ಪರಿಶೀಲಿಸಿ ಮಥುರಾದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಎಸಿಪಿ ರಾಜೇಂದರ್ ಸಿಂಗ್ ಯಾದವ್ ಮತ್ತು ಸಂಜಯ್ ಕುಮಾರ್ ನೇತೃತ್ವದ ತಂಡವು ಯುವತಿಯ ತಂದೆಯನ್ನು ರಕ್ಷಿಸಿದ್ದಾರೆ ಎಂದು ಡಿಸಿಪಿ ಆಂಟೊ ಆಲ್ಫೋನ್ಸ್ ಹೇಳಿದ್ದಾರೆ.
ತನಿಖೆ ವೇಳೆ, ಯುವತಿ ಸಂಜು ಪರಿಚಯವಿದ್ದನು. ಹೀಗಾಗಿ ಆತನೇ ನನ್ನ ತಂದೆಯನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಿದ್ದರು. ಬಳಿಕ ನಾವು ಆತ ಫೋನ್ ಮಾಡಿದ್ದಾಗ ಲೋಕೇಶನ್ ಟ್ರೇಸ್ ಮಾಡಿ ಬಂಧಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾನು ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗಬೇಕೆಂದು ಬಯಸಿದ್ದೆ. ಆದರೆ ಇದಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಆಕೆಯನ್ನು ಊರಿಗೆ ಕಳಿಸಿಬಿಟ್ಟಿದ್ದರು ಎಂದು ಹೇಳಿದ್ದಾನೆ. ಅದಕ್ಕೆ ಸ್ನೇಹಿತರ ಸಹಾಯದಿಂದ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಸಂಜು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಸದ್ಯಕ್ಕೆ ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಂಜುಗೆ ಸಹಾಯ ಮಾಡಿದ್ದ ಮೂವರು ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.