ಬೆಂಗಳೂರು: ನಗರದಲ್ಲಿ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಹೋಗಲು ಅಪಹರಣದ ಹೈಡ್ರಾಮಾ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ನಗರದ ಎಚ್‍ಬಿಆರ್ ಲೇಔಟ್ ಖಾಸಗಿ ಕಾಲೇಜಿನ ಹಾಸ್ಟೆಲಿನಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳು ರಾತ್ರೊರಾತ್ರಿ ಪ್ರಿಯಕರನ ಜೊತೆ ಹೋಗಿದ್ದು, ಬಳಿಕ ಕಿಡ್ನಾಪ್ ಎಂದು ನಾಟಕವಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟುಕಳುಹಿಸಿದ್ದಾರೆ.
ನಡೆದಿದ್ದೇನೆ?
ರಾತ್ರಿ ಹಾಸ್ಟೆಲಿಗೆ ಬೀಗ ಹಾಕಿ ಸೆಕ್ಯುರಿಟಿ ಗಾರ್ಡ್ ನೀರು ತರಲು ಹೋಗಿದ್ದರು. ಸೆಕ್ಯುರಿಟಿ ಇಲ್ಲದನ್ನು ನೋಡಿಕೊಂಡು ಯುವತಿ ಪ್ರಿಯಕರನ ಜೊತೆ ನಾಪತ್ತೆಯಾಗಿದ್ದಾಳೆ. ಆದರೆ ಈಕೆ ಅನುಮಾನ ಬಾರದಂತೆ ಹಾಸ್ಟೆಲಿನಿಂದ ಹೋಗುವಾಗ ಚೀರಾಡಿ ಪರಾರಿಯಾಗಿದ್ದಾಳೆ. ನಂತರ ಸೆಕ್ಯೂರಿಟಿ ಗಾರ್ಡ್ ಯುವತಿಯ ಚೀರಾಟ ಕೇಳಿ ಕಿಡ್ನಾಪ್ ಆಗಿದ್ದಾಳೆ ಎಂದು ಭಾವಿಸಿದ್ದಾರೆ. ಬಳಿಕ ಈ ವಿಚಾರವನ್ನು ಹಾಸ್ಟೆಲ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಈ ಬಗ್ಗೆ ತಿಳಿದ ತಕ್ಷಣ ಹಾಸ್ಟೆಲ್ ಸಿಬ್ಬಂದಿ ಮತ್ತು ಸೆಕ್ಯುರಿಟಿ ಗಾರ್ಡ್ ಕೂಡಲೇ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಯುವತಿಯ ಅಪಹರಣವಾಗಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲೇ ತನಿಖೆಗೆ ವಿಶೇಷ ತಂಡ ರಚಿಸಿದ್ದಾರೆ. ಆದರೆ ಪೊಲೀಸರ ತನಿಖೆ ವೇಳೆ ಯುವತಿಯ ಹೈಡ್ರಾಮಾ ಬಯಲಾಗಿದೆ.
ಯುವತಿ ಕಿಡ್ನಾಪ್ ನಂತೆ ಹೈಡ್ರಾಮಾ ಮಾಡಿ ಪ್ರಿಯಕರನ ಜೊತೆ ಹೋಗಿದ್ದಳು ಎಂದು ತಿಳಿದು ಬಂದಿದೆ. ನಂತರ ಪೊಲೀಸರು ಯುವತಿಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟುಕಳುಹಿಸಿದ್ದಾರೆ. ಈ ಘಟನೆ ಸಂಬಂಧ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv