– ಗೆಳತಿಯ ಮನೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ
ಚೆನ್ನೈ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಸರ್ಕಾರ, ಪೊಲೀಸರು ಸೋಂಕು ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಕ್ವಾರಂಟೈನ್‍ನಿಂದ ತಪ್ಪಿಸಿಕೊಂಡು ಹೋಗಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
22 ವರ್ಷದ ಯುವಕನ ಕ್ವಾರೆಂಟೈನ್‍ನಿಂದ ತಪ್ಪಿಸಿಕೊಂಡಿದ್ದನು. ಈತ ಇತ್ತೀಚೆಗೆ ದುಬೈನಿಂದ ಬಂದಿದ್ದನು. ಹೀಗಾಗಿ ಆತನನ್ನು ಪ್ರತ್ಯೇಕವಾಗಿ ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು. ಆದರೆ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಸಲುವಾಗಿ ಕ್ವಾರೆಂಟೈನ್ ನಿಂದ ತಪ್ಪಿಸಿಕೊಂಡು ಹೋಗಿದ್ದನು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧಕಾರ್ಯ ನಡೆಸಿದ್ದಾರೆ. ಕೊನೆಗೆ ಶಿವಗಂಗಾ ಜಿಲ್ಲೆಯ ಗೆಳತಿಯ ಮನೆಯಲ್ಲಿ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ನಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಆಕೆಯನ್ನು ಭೇಟಿಯಾಗಲು ತಪ್ಪಿಸಿಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಇದೇ ತಿಂಗಳು ಯುವಕನ ಪ್ರೇಯಸಿಗೆ ಪೋಷಕರು ಬೇರೆ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡಿದ್ದರು. ಈ ಮದುವೆ ಆಕೆಗೆ ಇಷ್ಟವಿರಲಿಲ್ಲ. ಆದರೂ ಮನೆಯವರು ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಗೆಳತಿ ಪ್ರಿಯಕರನಿಗೆ ತಿಳಿಸಿದ್ದಳು. ಕೊರೊನಾ ವೈರಸ್ ಇದ್ದರೂ ಪ್ರಿಯತಮೆಗಾಗಿ ಯುವಕ ದುಬೈನಿಂದ ಬಂದಿದ್ದನು. ಆದರೆ ಆತನನ್ನು ಮಧುರೈನ ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು.
ಕ್ಯಾರೆಂಟೈನ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಹುಡುಗನನ್ನು ಭೇಟಿಯಾದ ನಂತರ ಆತನ ಗೆಳತಿಯನ್ನು ಸಹ ಪ್ರತ್ಯೇಕವಾಗಿ ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.