ಕನ್ನಡದಲ್ಲಿ ವೆಬ್ ಸಿರೀಸ್ (Web Series) ತೀರಾ ಕಡಿಮೆ. ಅದರಲ್ಲೂ ಗುಣಮಟ್ಟದಲ್ಲಿ ತಯಾರಾದ ಕಥೆಗಳು ಇನ್ನೂ ಕಡಿಮೆ. ಈ ಎಲ್ಲ ಕೊರತೆಯನ್ನು ನೀಗಿಸುತ್ತದೆ ವಿಕ್ರಮ್ ರವಿಚಂದ್ರನ್ (Vikram Ravichandran) ಹಾಗೂ ಅದಿತಿ ಪ್ರಭುದೇವ (Aditi Prabhudev) ಕಾಂಬಿನೇಷನ್ ನ ‘ಲವ್ ಯೂ ಅಭಿ’ (Love U AbhiAbhi)ವೆಬ್ ಸಿರೀಸ್. ಗುಣಮಟ್ಟದಲ್ಲಿ ಉತ್ಕೃಷ್ಟತೆ ಮತ್ತು ತಾಂತ್ರಿಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಅದ್ಭುತವಾಗಿ ಏಳು ಕಂತುಗಳನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಾಳಿ.
ಈಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೆತ್ತಿರುವ ಅಭಿ, ತನ್ನದೇ ಆದ ಕನಸುಗಳನ್ನು ಕಟ್ಟಿಕೊಂಡಿರುವ ಶಿವ, ಈ ಜೋಡಿಯ ಜೀವನದಲ್ಲಿ ನಡೆಯುವ ಘಟನೆಗಳೇ ಲವ್ ಯೂ ಅಭಿ ಕಥೆಯ ಜೀವಾಳ. ಶಿವ ಮತ್ತು ಅಭಿ ಪಾತ್ರವನ್ನು ಇಬ್ಬರೂ ನಟರು ಸಮರ್ಥವಾಗಿ ನಿಭಾಯಿಸಿದ್ದಾರೆ. ಏಳು ಕಂತುಗಳು ಕುತೂಹಲವನ್ನು ಉಳಿಸಿಕೊಂಡು ಕಂತಿನಿಂದ ಕಂತಿಗೆ ಕೊಂಡಿಯಾಗಿ ನೋಡುಗನನ್ನು ಹಿಡಿದಿಡುತ್ತವೆ.
ಮನರಂಜನಾ ಲೋಕದಲ್ಲೀಗ ಹೊಸ ಆವೇಗ ಸೃಷ್ಟಿಸಿರುವ ಜಿಯೋ ಸಿನಿಮಾ ಕನ್ನಡದಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ಲವ್ ಯೂ ಅಭಿ ಎಂಬ ಸಿರೀಸ್ ಶುರು ಮಾಡಿದೆ. ಅಚ್ಚರಿಯ ಸಂಗತಿ ಅಂದರೆ, ಇಲ್ಲಿರುವ ಏಳು ಎಪಿಸೋಡ್ ಗಳನ್ನು ಅದು ಉಚಿತವಾಗಿ ನೋಡುಗನಿಗೆ ನೀಡಿದೆ. ಈ ಮೂಲಕ ಹೊಸ ಕ್ರಾಂತಿಯನ್ನೇ ಶುರು ಮಾಡಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ
ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್ರಾಗಜ್ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್ ಯು ಅಭಿ’ಗೆ ಅರುಣ್ ಬ್ರಹ್ಮ ಕ್ಯಾಮೆರಾ ಚಳಕವಿದ್ದು, ಪ್ರದಿಪ್ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್ ದಿನಕರ್ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್ ಗೌಡ ಮತ್ತು ಜಿ.ವಿ. ಸತೀಶ್ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.
ಪಾತ್ರಗಳ ಆಯ್ಕೆ, ಕಥೆಯನ್ನು ತಗೆದುಕೊಂಡು ಹೋಗಿರುವ ರೀತಿ. ಪ್ರತಿ ಪಾತ್ರಗಳ ಜೀವಂತಿಕೆ. ತಾಂತ್ರಿಕ ಶ್ರೀಮಂತಿಕೆ ಮತ್ತು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟ ರೀತಿಯ ಕಾರಣದಿಂದಾಗಿ ಲವ್ ಯೂ ಅಭಿ ಗಮನ ಸೆಳೆಯುತ್ತದೆ. ಮತ್ತಷ್ಟು ಗುಣಮಟ್ಟದ ವೆಬ್ ಸಿರೀಸ್ ಗೆ ಈ ಕಂತುಗಳು ಮುನ್ನುಡಿ ಬರೆಯುತ್ತವೆ.