– ಗಂಡ ಮಲಗಿದ ನಂತ್ರ ಪ್ರಿಯರಕನನ್ನ ಮನೆಗೆ ಕರೆದ್ಳು
– ಉಸಿರುಗಟ್ಟಿಸಿ ಪತಿಯ ಕೊಲೆ
ನವದೆಹಲಿ: 30 ವರ್ಷದ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಕೊಲೆ ಮಾಡಿಸಿರುವ ಘಟನೆ ದೆಹಲಿಯ ಅಶೋಕ್ ವಿಹಾರದಲ್ಲಿ ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ಶರತ್ ದಾಸ್ (46) ಎಂದು ಗುರುತಿಸಲಾಗಿದೆ. ಈತನ ಪತ್ನಿ ಅನಿತಾ ಪ್ರಿಯಕರ ಸಂಜಯ್ ಜೊತೆ ಸೇರಿಕೊಂಡು ಕೊಲೆ ಮಾಡಿಸಿದ್ದಾಳೆ. ಸ್ಥಳೀಯರು ನೀಡಿದ ಮಾಹಿತಿಯ ನಂತರ ಪೊಲೀಸ್ ತಂಡ ಸ್ಥಳಕ್ಕೆ ಬಂದು ಮೃತ ದಾಸ್ ಅಂತ್ಯಕ್ರಿಯೆಯನ್ನು ನಿಲ್ಲಿಸಿದ್ದಾರೆ. ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆಗ ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿದೆ.
ಏನಿದು ಪ್ರಕರಣ?
ಮೃತ ದಾಸ್ ಅಶೋಕ್ ವಿಹಾರ್ ಪ್ರದೇಶದಲ್ಲಿ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಮೇ 2 ರಂದು ಬೆಳಗ್ಗೆ ಆರೋಪಿ ಅನಿತಾ ನನ್ನ ಪತಿ ಮಲಗಿದ್ದಲ್ಲೇ ಮೃತಪಟ್ಟಿದ್ದಾನೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾಳೆ. ಅಲ್ಲದೇ ಕೋವಿಡ್-19 ಸೋಂಕಿನಿಂದಾಗಿ ಅವರು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾಳೆ. ನೆರೆಹೊರೆಯವರು ತಮ್ಮ ವಸತಿ ಪ್ರದೇಶದಲ್ಲಿ ಶಂಕಿತ ಕೊರೊನಾ ವ್ಯಕ್ತಿಯ ಸಾವಿನ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ತಂಡ ಬಂದು ಅನಿತಾಳ ಬಳಿ ವಿವರ ಕೇಳಿದ್ದಾರೆ. ಆದರೆ ಪತ್ನಿ ಸರಿಯಾಗಿ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಕೊನೆಗೆ ನೆರೆಹೊರೆಯವರು, ಮೃತ ದಾಸ್ ಆರೋಗ್ಯವಾಗಿಯೇ ಇದ್ದರು. ಅನಿತಾ ಹೇಳಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿರಲಿಲ್ಲ ಎಂದು ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದರಿಂದ ಪೊಲೀಸ್ ಅಧಿಕಾರಿಗಳು ದಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ನಂತರ ಆರೋಪಿ ಅನಿತಾ ಬಳಿ ಮೃತ ದಾಸ್ ಕೋವಿಡ್ -19 ಪರೀಕ್ಷಾ ವರದಿ ಕೇಳಿದ್ದಾರೆ. ಆಗ ಪತ್ನಿ ಅನಿತಾ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಡಿಸಿಪಿ ವಿಜಯಂತ್ ಆರ್ಯಗೆ ತಿಳಿಸಿದ್ದಾಳೆ. ಕೊನೆಗೆ ಪೊಲೀಸರು ಅಂತ್ಯಸಂಸ್ಕಾರವನ್ನು ನಿಲ್ಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಉಸಿರುಕಟ್ಟಿ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿದೆ.
ಮೃತ ದಾಸ್ ಪತ್ನಿಯನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಅನಿತಾ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿ ಅನಿತಾ, ಸಂಜಯ್ ಎಂಬಾತನ್ನು ಪ್ರೀತಿಸುತ್ತಿದ್ದಳು. ಸಂಜಯ್ ಜೊತೆಗಿನ ಸಂಬಂಧದ ಬಗ್ಗೆ ಪತಿಗೆ ತಿಳಿದಿದೆ. ಆದ್ದರಿಂದ ಪತಿ ಮಲಗಿದ ನಂತರ ಆಕೆ ಸಂಜಯ್‍ನನ್ನು ಮನೆಗೆ ಕರೆಸಿಕೊಂಡು ದಾಸ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.