– ಯುವಕನ ಪ್ರೀತಿಯ ಹುಚ್ಚಾಟಕ್ಕೆ ಯುವತಿ ಸೂಸೈಡ್
ಹೈದರಾಬಾದ್: ಯುವಕನ ಕಿರುಕುಳಕ್ಕೆ ಬೇಸತ್ತು ತರಬೇತಿ ಶಿಕ್ಷಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಅಕ್ಕಲರೆಡ್ಡಿ ಪಲ್ಲೆ ಗ್ರಾಮದ ನಿವಾಸಿ ಶಾಂತಿಪ್ರಿಯ ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಕೃಷ್ಣಸಾರದ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಆದರೆ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ ಯುವಕನ ಕಿರುಕುಳದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ?
ಅದೇ ಗ್ರಾಮದ ಯುವಕನೊಬ್ಬ ಶಾಂತಿಪ್ರಿಯ ಶಿಕ್ಷಕಿಯಾಗಿದ್ದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದನು. ಈ ವೇಳೆ ಯುವಕ ಶಾಂತಿಪ್ರಿಯಳನ್ನು ಪ್ರೀತಿ ಮಾಡಿದ್ದಾನೆ. ಪ್ರತಿದಿನ ಆಕೆಯನ್ನು ಪ್ರೀತಿಸು ಎಂದು ಕಾಡಿಸುತ್ತಿದ್ದನು. ಶಿಕ್ಷಕಿ ತನಗೆ ಇಷ್ಟವಿಲ್ಲ ಎಂದು ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಆದರೂ ಯುವಕ ಪದೇ ಪದೇ ಆಕೆಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನು.
ಕೊನೆಗೆ ಆತನ ಕಿರುಕುಳವನ್ನು ಸಹಿಸಲಾಗದೆ ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಶಾಂತಿಯ ತಾಯಿ ನೀಡಿದ ದೂರಿನ ಮೇರೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್‍ಐ ಮೋಹನ್ ಹೇಳಿದ್ದಾರೆ.
ಯುವಕ ನಮ್ಮ ಮಗಳನ್ನು ಪ್ರೀತಿ ಮಾಡುವಂತೆ ಕಾಡಿಸುತ್ತಿದ್ದನು. ಅಲ್ಲದೇ ಮನೆಗೆ ಬಂದು ಕತ್ತಿಯಿಂದ ಬೆದರಿಕೆ ಕೂಡ ಹಾಕಿದ್ದನು. ಆತನ ಬೆದರಿಕೆಗಳಿಗೆ ಹೆದರಿ ಶಾಂತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತನನ್ನೂ ಗಲ್ಲಿಗೇರಿಸಿ ಎಂದು ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕಿದ್ದಾರೆ.