ಬಾಗಲಕೋಟೆ: ಪ್ರೀತಿಸುವುದು ಬಿಟ್ಟು ಚೆನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೊಬ್ಬ ವಿದ್ಯುತ್ ಕಂಬದ ಆ್ಯಂಕಲ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ನಡೆದಿದೆ.
ಚಂದ್ರಶೇಖರ್ ಮಾದರ (18) ನೇಣಿಗೆ ಶರಣಾದ ಯುವಕ. ಮೃತ ಚಂದ್ರಶೇಖರ್ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತುರಡಗಿ ಗ್ರಾಮದವನು ಎಂದು ತಿಳಿದು ಬಂದಿದೆ. ಚಂದ್ರಶೇಖರ್ ವಿಜಯಪುರದಲ್ಲಿ ಡಿಪ್ಲೊಮಾ ಓದುತ್ತಿದ್ದನು. ಈತ ಮಾವನ ಮಗಳನ್ನೇ ಪ್ರೀತಿ ಮಾಡುತ್ತಿದ್ದು, ಇವನ ಪ್ರೀತಿ ವಿಚಾರ ಸಂಬಂಧಿಕರಿಗೆ ಗೊತ್ತಾಗಿದೆ. ಅದಕ್ಕೆ ಚಂದ್ರಶೇಖರ್‌ನನ್ನು ಮನೆಗೆ ಕರೆಸಿ ಚಿಕ್ಕವಯಸ್ಸಿಗೆ ಪ್ರೀತಿ, ಪ್ರೇಮ ಎಂದು ಸುತ್ತಾಡಬೇಡ, ಚೆನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ್ದಾರೆ.
ನಾನು ಚೆನ್ನಾಗಿ ಓದುತ್ತೇನೆ, ಮತ್ತೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿ ಶನಿವಾರ ಸಂಜೆ ಊರಿನಿಂದ ಹೊರಟ್ಟಿದ್ದಾನೆ. ಆದರೆ ದಾರಿ ಮಧ್ಯೆ ಗದ್ದನಕೇರಿ ಕ್ರಾಸ್ ಬಳಿ ವಿದ್ಯುತ್ ಕಂಬದ ಆ್ಯಂಕಲ್‍ಗೆ ಬ್ಯಾಗ್ ಸಮೇತ ನೇಣು ಹಾಕಿಕೊಂಡಿದ್ದಾನೆ. ಇಂದು ಬೆಳಗ್ಗೆ ಸಾರ್ವಜನಿಕರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ.
ಮೃತ ಯುವಕನದ್ದು ಬಡ ಕುಟುಂಬವಾಗಿತ್ತು. ಆದ್ದರಿಂದ ಆತನ ತಂದೆ-ತಾಯಿ ದುಡಿಯುವುದಕ್ಕೆ ಗೋವಾಕ್ಕೆ ಗುಳೆ ಹೋಗಿದ್ದಾರೆ. ಆದರೆ ಇಲ್ಲಿ ಮಗ ಪ್ರೀತಿ, ಪ್ರೇಮ ಎಂದು ಜೀವ ಕಳೆದುಕೊಂಡಿದ್ದಾನೆ. ಸದ್ಯಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ತಂದೆ-ತಾಯಿ ಗೋವಾದಿಂದ ಬರುತ್ತಿದ್ದಾರೆ. ಮಾಹಿತಿ ತಿಳಿದು ಬಾಗಲಕೋಟೆ ಗ್ರಾಮೀಣ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.