ಗುವಾಹಟಿ: ಅಸ್ಸಾಂನ ಗೋಲಪಾಡಾದಲ್ಲಿ ಸೆರೆಯಾಗಿರುವ ಮೂವರ ಶಂಕಿತ ಉಗ್ರರ ಪೈಕಿ ಓರ್ವ ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಯೋತ್ಪಾದನೆ ಸಂಘಟನೆಗೆ ಸೇರಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
24 ವರ್ಷದ ಲೂಯಿತ್ ಜಮೀಲ್ ಜಮಾನ್ ಬಂಧನದ ನಂತರ ದೆಹಲಿ ಪೊಲೀಸರ ಮುಂದೆ ತನ್ನ ಪ್ರೇಮ ಕಥೆಯನ್ನು ಹೇಳಿದ್ದಾನೆ. ನಾನು ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ಆದರೆ ಆಕೆಯ ಕುಟುಂಬಸ್ಥರು ಜಾತಿ ಕಾರಣ ನೀಡಿ ನಮ್ಮ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದರು. ಹಾಗಾಗಿ ನಮ್ಮಿಬ್ಬರ ಪ್ರೀತಿ ಮುರಿದು ಬಿತ್ತು. ನನ್ನ ಪ್ರೀತಿಯನ್ನು ವಿರೋಧಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದ್ದಾನೆ.
Advertisement
Advertisement
ಅಸ್ಸಾಂ ಮತ್ತು ದೆಹಲಿಯಲ್ಲಿ ಉಗ್ರ ಚಟುವಟಿಕೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಲೂಯಿತ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಸಮಾಜ ನನ್ನೊಂದಿಗೆ ಅತ್ಯಂತ ಕೆಟ್ಟದಾಗಿ ವರ್ತಿಸಿತು. ನನ್ನ ಜೊತೆಗಿನ ಪ್ರೇಮವನ್ನು ಕಡಿದುಕೊಳ್ಳುವಂತೆ ಯುವತಿಯ ಮೇಲೆ ಒತ್ತಡ ಹಾಕಲಾಯ್ತು. ಯುವತಿಯ ಜೊತೆಗೆ ಕಾಣಿಸಿಕೊಳ್ಳಬಾರದು ನನಗೂ ಬೆದರಿಕೆ ಹಾಕಿದರು ಎಂದು ಲೂಯಿತ್ ವಿಚಾರಣೆ ವೇಳೆ ಹೇಳಿದ್ದಾನೆ.
Advertisement
ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಲೂಯಿತ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆ. ವಾಟ್ಸಪ್ ನ ಕೆಲವೊಂದು ಗ್ರೂಪ್ ಗಳು ಯುವಕರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿವೆ. ವಾಟ್ಸಪ್ ಮೂಲಕವೇ ಐಇಡಿ ಸೇರಿದಂತೆ ಇನ್ನಿತರ ಸ್ಫೋಟಕ ವಸ್ತುಗಳ ತಯಾರಿಕೆಯನ್ನು ಹೇಳಿಕೊಡಲಾಗುತ್ತಿತ್ತು. ಹೇಗೆ ಮತ್ತು ಯಾವ ಕ್ಷೇತ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಬೇಕೆಂಬುದರ ಬಗ್ಗೆ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.