ಪೊಲೀಸ್ ಠಾಣೆಯಲ್ಲಿ ಆರಂಭವಾದ ಪ್ರೀತಿ ಆತ್ಮಹತ್ಯೆಯಲ್ಲಿ ಅಂತ್ಯ!

Public TV
3 Min Read
UDP SUICIDE FINAL

ಉಡುಪಿ: ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಮತ್ತೋರ್ವ ಮಹಿಳಾ ಪೇದೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಪೊಲೀಸ್ ಕಾನ್ ಸ್ಟೇಬಲ್ ನಾಗರಾಜ್ (27) ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅವರ ಪ್ರೇಯಸಿ ರಮ್ಯಾ(ಹೆಸರು ಬದಲಾಯಿಸಲಾಗಿದೆ) ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರು ಕೂಡ ಕೊಲ್ಲೂರು ಠಾಣೆಯಲ್ಲೇ ಸೇವೆಯಲ್ಲಿದ್ದರು. ಪ್ರೀತಿ ಹಾಗೂ ಮನಸ್ತಾಪವೇ ಈ ಎರಡು ದುರ್ಘಟನೆಗೆ ಕಾರಣ ಎಂಬುದು ಸ್ಪಷ್ಟವಾಗಿದೆ.

ನಾಗರಾಜ್ ಸೌಪರ್ಣಿಕ ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರೆ, ರಮ್ಯಾ ಕೊಲ್ಲೂರು ಪೊಲೀಸ್ ಠಾಣೆಯಲ್ಲೇ ಇರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಅದೃಷ್ಟವಶಾತ್ ರಮ್ಯಾರನ್ನು ಪೊಲೀಸರೇ ಬದುಕಿಸಿದ್ದಾರೆ.

UDP 5

ನಾಗರಾಜ್ ಮೂಲತಃ ದಾವಣಗೆರೆಯ ಮಲೆಬೆನ್ನೂರಿನ ಹಿಡಗನಗಟ್ಟ ಗ್ರಾಮದ ನಿವಾಸಿ. ಕಳೆದ 2 ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಕಳೆದ ಕೆಲವು ದಿನಗಳಿಂದ ಜೋಯ್ಡಾಗೆ ಹೆಚ್ಚುವರಿ ಕೆಲಸದ ನಿಮಿತ್ತ ತೆರಳಿದ್ದರು. 2 ದಿನಗಳ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ನಾಗರಾಜ್ ಭಾನುವಾರ ಮುಂಜಾನೆ ಪೊಲೀಸ್ ವಸತಿ ಗೃಹದಲ್ಲೇ ನೇಣಿಗೆ ಶರಣಾಗಿದ್ದಾರೆ.

ನಾಗರಾಜ್ ಅವರ ಸಾವಿನ ಸುದ್ದಿ ತಿಳಿದ ಪ್ರೇಯಸಿ ರಮ್ಯಾ ಪೊಲೀಸ್ ಠಾಣೆಯಲ್ಲೇ ಇದ್ದ ಬಾವಿಗೆ ಹಾರಿದ್ದಾರೆ. ಠಾಣೆಯಲ್ಲಿದ್ದ ಪೊಲೀಸರೇ ಬಾವಿಗೆ ಧುಮುಕಿ ಆಕೆಯನ್ನು ಬದುಕಿಸಿದ್ದಾರೆ. ಬಳಿಕ ಕುಂದಾಪುರ ಸಮೀಪದ ವಿನಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ನಾಗರಾಜ್ ಹಾಗೂ ರಮ್ಯಾ ಒಂದೇ ಬ್ಯಾಚ್ ಮೇಟ್ ಆಗಿದ್ದರು. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನಾಗರಾಜ್ ಹಾಗೂ ರಮ್ಯಾ ಅದೃಷ್ಟವೆಂಬಂತೆ ಒಂದೇ ಪೊಲೀಸ್ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಗರಾಜ್ ತನ್ನ ಪ್ರೇಮದ ಬಗ್ಗೆ ಮನೆಯಲ್ಲೂ ಹೇಳಿಕೊಂಡಿದ್ದ. ನಾಗರಾಜ್ ಹಾಗೂ ರಮ್ಯಾ ಮನೆಯವರಿಂದಲೂ ಒಪ್ಪಿಗೆ ಸಿಕ್ಕಿತ್ತು.

UDP SUICIDE

ದಿನ ಕಳೆದಂತೆ ಇವರಿಬ್ಬರ ನಡುವೆ ಮನಸ್ತಾಪ ಬೆಳೆದಿತ್ತು. ಚಿಕ್ಕಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಈ ಬಗ್ಗೆ ಡೆತ್ ನೋಟ್ ಕೂಡ ಬರೆದ ನಾಗರಾಜ್ ತನ್ನ ಸಾವಿಗೆ ನಾನೇ ಕಾರಣ. ನನಗೆ ತುಂಬಾ ನೋವಾಗಿದೆ. ನನ್ನ ಮಾತನ್ನು ರಮ್ಯಾ ಕೇಳುತ್ತಿಲ್ಲ. ಅವಳೊಂದಿಗೆ ನೆಮ್ಮದಿಯಿಲ್ಲ. ನನ್ನನ್ನು ಕ್ಷಮಿಸಿ. ನನ್ನ ಸಾವಿಗೆ ನಾನೇ ಹೊಣೆ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ ನಾಗರಾಜ್ ಸ್ನೇಹಿತ ಫಾರುಕ್, ಕೂಲಿ ಮಾಡಿಕೊಂಡಿದ್ದ ನಾಗರಾಜ್, ಪೊಲೀಸ್ ಉದ್ಯೋಗ ಸೇರಿದ್ದ. ಆತ್ಮಹತ್ಯೆ ಮಾಡಿರುವುದು ಬೇಸರ ತಂದಿದೆ. ನಾಗರಾಜ್ ತುಂಬಾ ಸ್ನೇಹಸ್ವಭಾವ ವ್ಯಕ್ತಿಯಾಗಿದ್ದನು ಅಂತ ಹೇಳಿದ್ದಾರೆ.

ಕೆಲಸದ ವಿಚಾರದಲ್ಲಿ ಒತ್ತಡ ತಂದುಕೊಳ್ಳುತ್ತಿದ್ದ. ಇನ್ನುಳಿದಂತೆ ಮನೆ ವಿಚಾರ ಬಂದಾಗ ಖುಷಿಯಾಗಿದ್ದ. ಪೊಲೀಸ್ ಆಗಬೇಕೆಂದು ತುಂಬ ಆಸೆಯನ್ನಿಟ್ಟುಕೊಂಡಿದ್ದ ನಾಗರಾಜ್, ಕೂಲಿ ಕೆಲಸ ಮಾಡಿ ಪೊಲೀಸ್ ಕೆಲಸಕ್ಕೆ ಸೇರಿದ್ದ. ಇನ್ನು ಪ್ರೀತಿ ವಿಚಾರವಾಗಿ ಮನೆಯಲ್ಲಿ ಯುವತಿಯ ಫೋಟೋ ತೋರಿಸಿದ್ದ. ಫೋಟೋ ನೋಡಿ ಮನೆಯಲ್ಲೂ ಒಪ್ಪಿಗೆ ನೀಡಲಾಗಿತ್ತು. ಆದರೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದ ಏಕೆ ಅನ್ನೋದು ಗೊತ್ತಾಗುತ್ತಿಲ್ಲ. ಡೆತ್ ನೋಟಿನಲ್ಲೂ ಕ್ಷಮಿಸಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾನೆ. ನಾಗರಾಜ್ ಸಾವು ದುಃಖ ತಂದಿದೆ ಅಂತ ಸಹೋದರ್ ಅರುಣ್ ಹೇಳಿದ್ದಾರೆ.

UDP 1

ಸದ್ಯ ಮೃತ ನಾಗರಾಜ್ ಮೃತದೇಹವನ್ನು ಮಣಿಪಾಲದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.

ಮನೆಯಲ್ಲಿ ವಿರೋಧವಿದ್ದು ಠಾಣೆಗೆ ಹಾರಿ ಬರುವ ಅದೆಷ್ಟೋ ಜೋಡಿ ಹಕ್ಕಿಗಳನ್ನು ದಂಪತಿಗಳನ್ನಾಗಿ ಮಾಡಿ ಕಳುಹಿಸಿದ ಉದಾಹರಣೆ ಸಾಕಷ್ಟಿದೆ. ಆದ್ರೆ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ವರ್ಷಗಟ್ಟಲೆ ಸಾಕಿ ಸಲಹಿದ- ಮಗ ಮಗಳಿಗೆ ಬೆಟ್ಟದಷ್ಟು ಪ್ರೀತಿಕೊಟ್ಟು, ಸಿಕ್ಕಾಪಟ್ಟೆ ಕನಸನ್ನಿಟ್ಟ ಪೋಷಕರು ಈ ಪ್ರೀತಿ- ಪ್ರೇಮ- ಆತ್ಮಹತ್ಯೆಯ ಸಂದರ್ಭ ಒಂದು ಕ್ಷಣವೂ ಕಣ್ಮುಂದೆ ಬರೋದೇ ಇಲ್ವಾ ಅನ್ನೋದೆ ಉತ್ತರ ಸಿಗದ ಪ್ರಶ್ನೆಯಾಗಿದೆ.

UDP 2

Share This Article
Leave a Comment

Leave a Reply

Your email address will not be published. Required fields are marked *