ಶ್ರೀನಗರ: ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆಯ ಆಪರೇಷನಲ್ ಕಮಾಂಡರ್ ಖಲೀದ್‍ನನ್ನು ಉತ್ತರ ಕಾಶ್ಮೀರದಲ್ಲಿ ಇಂದು ಭದ್ರತಾ ಪಡೆ ಹತ್ಯೆ ಮಾಡಿದೆ.
ಖಲೀದ್‍ನನ್ನು ಟ್ರ್ಯಾಕ್ ಮಾಡಲು ನೆರವಾಗಿದ್ದು ಸ್ವತಃ ಆಕೆಯ ಗರ್ಲ್‍ಫ್ರೆಂಡ್ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕಳೆದ ವರ್ಷ ಒಂದು ದಿನ ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಚೇರಿಗೆ 20 ವರ್ಷದ ಯುವತಿಯೊಬ್ಬಳು ಬಂದು “ನನಗೆ ಅತ ಸಾಯಬೇಕಷ್ಟೇ” ಎಂದು ಹೇಳಿದ್ದಳು. ಜೈಷ್ ಎ ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಖಲೀದ್‍ನನ್ನು ಕೊಲ್ಲಬೇಕು ಎಂದು ಆಕೆ ಹೇಳಿದ್ದಳು. ನಾನು ಆತನ ಜಾಗವನ್ನ ತೋರಿಸ್ತೀನಿ. ಉಳಿದಿದ್ದು ನೀವು ಮಾಡಿ ಎಂದು ಪೊಲೀಸ್ ಅಧಿಕಾರಿಗೆ ಆಕೆ ಹೇಳಿದ್ದಳು. ಇಂದು ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಖಲೀದ್‍ನನ್ನು ಹೊಡೆದುರುಳಿಸಿದೆ.
ಕಳೆದ ವರ್ಷ ಯುವತಿಗೆ ತಾನು ಗರ್ಭವತಿ ಎಂದು ಗೊತ್ತಾಗಿತ್ತು. ಇದನ್ನ ಅತ್ಯಂತ ಸಂತೋಷದಿಂದ ಆಕೆ ಖಲೀದ್ ಬಳಿ ಹೇಳಿಕೊಂಡಿದ್ದಳು. ಆತ ಕೂಡ ತನ್ನಂತೆಯೇ ಖುಷಿ ಪಡುತ್ತಾನೆ ಎಂದು ನಿರೀಕ್ಷಿಸಿದ್ದಳು. ಆದ್ರೆ ಆತನ ಉತ್ತರ ಆಕೆಯ ಹೃದಯವನ್ನೇ ಒಡೆದಿತ್ತು. ನಿನ್ನಿಂದ ಅಥವಾ ನಿನ್ನ ಗರ್ಭದಲ್ಲಿರೋ ಮಗುವಿಂದ ನನಗೇನೂ ಆಗಬೇಕಿಲ್ಲ ಎಂದು ಆತ ಹೇಳಿದ್ದ. ನಂತರ ಆಕೆ ತನ್ನ ಸಂಬಂಧಿಯೊಬ್ಬರೊಂದಿಗೆ ಪಂಜಾಬ್‍ನ ಜಲಂದರ್‍ಗೆ ಹೋಗಿ ರಹಸ್ಯವಾಗಿ ಅಬಾರ್ಷನ್ ಮಾಡಿಸಿಕೊಂಡಿದ್ದಳು.
ಖಲೀದ್ ತನ್ನನ್ನು ಬಳಸಿಕೊಂಡು, ಇನ್ನೂ ಜನಿಸದ ತನ್ನ ಮಗುವಿನ ಸಾವಿಗೆ, ತನ್ನ ಅವಮಾನಕ್ಕೆ ಕಾರಣವಾದ ಎಂದು ನಂಬಿದ್ದ ಆಕೆ ಆತನನ್ನು ಮುಗಿಸಲೇಬೇಕೆಂಬ ನಿರ್ಧಾರದೊಂದಿಗೆ ವಾಪಸ್ ಬಂದಿದ್ದಳು.
ಹಲವು ವರ್ಷಗಳಿಂದ ಖಲೀದ್ ಜೈಷ್ ಎ ಮಹಮ್ಮದ್‍ನ ಆತ್ಮಹತ್ಯಾ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. ಉತ್ತರದಿಂದ ದಕ್ಷಿಣ ಕಾಶ್ಮೀರಕ್ಕೆ ಉಗ್ರರನ್ನ ಕಳಿಸುತ್ತಿದ್ದ. ಉತ್ತರ ಕಾಶ್ಮೀರದಲ್ಲಿ ಅದರಲ್ಲೂ ಸೋಪೋರ್, ಬರಾಮುಲ್ಲಾ, ಹಂದ್ವಾರಾ ಹಾಗೂ ಕುಪ್ವಾರಾದಲ್ಲಿನ ಸಾಕಷ್ಟು ದಾಳಿಗಳ ಹಿಂದೆ ಖಲೀದ್ ಇದ್ದ. ಈ ಎಲ್ಲದರ ನಡುವೆಯೂ ಖಲೀದ್ ತನ್ನ ಲವರ್-ಬಾಯ್ ಇಮೇಜ್ ಉಳಿಸಿಕೊಂಡಿದ್ದ. ಹತ್ಯೆಯ ಸಮಯದಲ್ಲೂ ಆತನೊಂದಿಗೆ 3-4 ಗರ್ಲ್‍ಫ್ರೆಂಡ್‍ಗಳಿದ್ದರು ಎಂದು ವರದಿಯಾಗಿದೆ.
ಕೆಲವು ಸಮಯದ ಹಿಂದೆ ಯುವತಿ ಖಲೀದ್ ಇರುವ ನಿರ್ದಿಷ್ಟ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಳು. ಆದ್ರೆ ಪೊಲೀಸರು ಅಲ್ಲಿಗೆ ತಲುಪಿ ಕಾರ್ಯಾಚರಣೆ ಶುರು ಮಾಡುವ ವೇಳೆಗೆ ಆತ ಅಲ್ಲಿಂದ ಆಗಲೇ ಹೊರಟುಹೋಗಿದ್ದ. ಈ ಬಾರಿಯೂ ಕೂಡ ಯುವತಿಯ ಆಪ್ತರಿಂದ ಜಮ್ಮು ಕಾಶ್ಮೀರ ಪೊಲೀಸರಿಗೆ ಖಲೀದ್ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸೋಪೋರ್‍ಗೆ ಖಲೀದ್ ಪ್ರವೇಶಿಸಲು ರಹಸ್ಯ ತಂಡ ಕಾದು ಕುಳಿತಿತ್ತು. ಮುಖ್ಯವಾದ ವ್ಯಕ್ತಿಯನ್ನ ಭೇಟಿಯಾಗಲು ಖಲೀದ್ ಬಂದಿದ್ದ. ಈ ವೇಳೆ ದಾಳಿ ನಡೆದಿದ್ದು ಖಲೀದ್ ಮನಬಂದಂತೆ ಗುಂಡು ಹಾರಿಸಿದ್ದ. ಆದ್ರೆ ಸ್ಪೆಷಲ್ ಆಪರೇಷನ್ಸ್ ಗ್ರೂಪ್(ಎಸ್‍ಓಜಿ) ಕೂಡ ಪ್ರತಿದಾಳಿ ಮಾಡಿ ಆತನ್ನು ಗಾಯಗೊಳಿಸಿತು. ಗುಂಡಿನ ಚಕಮಕಿ ಕೇವಲ 4 ನಿಮಿಷಗಳವರೆಗೆ ನಡೆಯಿತು.
ಲಾದೂರಾದ ಸರ್ಕಾರಿ ಶಾಲೆಗೆ ಹತ್ತಿರವಾಗಿದ್ದ ಮನೆಯನ್ನು ಖಲೀದ್ ತಲುಪಿದ್ದ. ಕೊನೆಗೆ ಎಸ್‍ಓಜಿ, ಸಿಆರ್‍ಪಿಎಫ್‍ನ 3 ಬೆಟಾಲಿಯನ್ ಹಾಗೂ 32 ರಾಷ್ಟ್ರೀಯ ರೈಫಲ್ಸ್ ನವರು ಖಲೀದ್‍ನನ್ನು ಹೊಡೆದುರುಳಿಸಿದ್ದಾರೆ.