ಬಳ್ಳಾರಿ: ಸೈಕೋ ಯುವಕನೊಬ್ಬ ಪ್ರೀತಿಸುವಂತೆ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದು, ಇದೀಗ ಮಹಿಳೆಗೆ ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಹೊಸಪೇಟೆಯ ಕಾಲೇಜು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೊಸಪೇಟೆ ನಿವಾಸಿ ರಾಘವೇಂದ್ರ (26) ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಸದ್ಯ ಮಹಿಳೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಾಘವೇಂದ್ರ ಕಳೆದ ಒಂದು ವರ್ಷದಿಂದ ವಿವಾಹಿತ ಮಹಿಳೆಯ ಹಿಂದೆ ಬಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದನು. ಆದರೆ ಮಹಿಳೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ರಾಘವೇಂದ್ರ ಶುಕ್ರವಾರ ಸಂಜೆ ಮಹಿಳೆ ಮನೆಗೆ ಹೋಗುವ ಸಂದರ್ಭದಲ್ಲಿ ಅಡ್ಡಗಟ್ಟಿ ಬಾಟಲಿಯಿಂದ ಹೊಟ್ಟೆ ಮತ್ತು ಕೈಗೆ ಇರಿದಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದವರು ಮಹಿಳೆಯನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಗಾಯಾಳು ಮಹಿಳೆಗೆ ರಾಘವೇಂದ್ರ ಕಳೆದ ಒಂದು ವರ್ಷಗಳಿಂದ ಕಾಟ ಕೊಡುತ್ತಿದ್ದರೂ ಗೌರವಕ್ಕೆ ಅಂಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದಾಳೆ. ಆದರೆ ಈಗ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಘವೇಂದ್ರನನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.