– ಸಾಯುವ ಮುನ್ನ ದೇವಸ್ಥಾನದಲ್ಲಿ ಮದ್ವೆ
– 18 ವರ್ಷದಲ್ಲೇ ಪ್ರೇಯಸಿಗೆ ವಿವಾಹ
ಚೆನ್ನೈ: ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಅಂಬೂರ್ ಬಳಿ ನಡೆದಿದೆ.
ಅಂಬೂರ್ ಬಳಿ ರೈಲ್ವೆ ಹಳಿ ಮೇಲೆ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅಂಬೂರ್ ಬಳಿಯ ಸಾಂಬಾಸಿಕುಪ್ಪಂ ಗ್ರಾಮದ ನಿವಾಸಿ ಜಿ. ರಾಮದಾಸ್ (29) ಮತ್ತು ತಿರುಪತ್ತೂರು ನಿವಾಸಿ ನಂದಿನಿ (20) ಎಂದು ಗುರುತಿಸಲಾಗಿದೆ.
Advertisement
Advertisement
ಏನಿದು ಪ್ರಕರಣ?
ಮೃತ ನಂದಿನಿಗೆ 18 ವರ್ಷದಲ್ಲೇ ತನ್ನ ದೂರದ ಸಂಬಂಧಿ ಜೊತೆ ಪೋಷಕರು ಮದುವೆ ಮಾಡಿಸಿದ್ದರು. ಆದರೆ ಮದುವೆಯಾದ ಮೂರು ತಿಂಗಳಲ್ಲಿ ಅವಳು ಪತಿಯನ್ನು ಬಿಟ್ಟು ಬಂದಿದ್ದಳು. ಇತ್ತ ನಂದಿನಿ ಪತಿಯಿಂದ ವಿಚ್ಛೇದನ ಕೂಡ ಪಡೆದಿರಲಿಲ್ಲ. ನಂತರ ನಂದಿನಿ ಕೊಯಮತ್ತೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
Advertisement
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಮದಾಸ್ ಆರು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದ ಮೂಲಕ ಪರಿಚಯನಾಗಿದ್ದನು. ದಿನಕಳೆದಂತೆ ಇಬ್ಬರು ಸ್ನೇಹಿತರಾಗಿದ್ದು, ಪ್ರೀತಿ ಮಾಡಲು ಶುರು ಮಾಡಿದರು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ನಂದಿನಿಯ ಪೋಷಕರು ಆತ ಬೇರೆ ಜಾತಿಯವನು ಅಲ್ಲದೇ ಈಗಾಗಲೇ ನಂದಿನಿಗೆ ಮದುವೆಯಾಗಿದೆ ಎಂದು ಅವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ ನಂತರ ಇಬ್ಬರು ಮನೆ ಬಿಟ್ಟು ಹೋಗಿದ್ದಾರೆ. ಗುರುವಾರ ಸಂಜೆ ರಾಮದಾಸ್ ತಮ್ಮ ಮನೆಯವರಿಗೆ ಫೋನ್ ಮಾಡಿ, ಅಂಬೂರಿನ ವೀರವರ್ ದೇವಸ್ಥಾನದಲ್ಲಿ ನಂದಿನಿಯನ್ನು ಮದುವೆಯಾಗಿದ್ದೇನೆ. ಹೀಗಾಗಿ ನಾನು ಮತ್ತೆ ಮನೆಗೆ ವಾಪಸ್ ಬರುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾನೆ. ಆದರೆ ಶುಕ್ರವಾರ ರಾಮದಾಸ್ ಮತ್ತು ನಂದಿನಿ ಮೃತದೇಹ ಬೆಳಿಗ್ಗೆ ರೈಲ್ವೆ ಹಳಿಗಳಲ್ಲಿ ಪತ್ತೆಯಾಗಿದೆ.
ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರೈಲ್ವೆ ಹಳಿ ಮೇಲೆ ಮಲಗಿದ್ದಾಗ ಸೆಲ್ಫಿ ತೆಗೆದುಕೊಂಡಿದ್ದಾರೆ. ಚೆನ್ನೈನಿಂದ ಬೆಂಗಳೂರಿಗೆ ಹೋಗುವ ರೈಲು ಅವರ ಮೇಲೆ ಹರಿದಿದೆ. ಸದ್ಯಕ್ಕೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಂಬೂರ್ ಡಿಎಸ್‍ಪಿ ಹೇಳಿದ್ದಾರೆ.