ಕೊಪ್ಪಳ: ಮನೆಯವರ ವಿರೋಧದ ನಡುವೆಯೂ ಪ್ರೇಮಿಗಳಿಬ್ಬರು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ ವಿವಾಹವಾದ ನವ ಜೋಡಿಗಳು ನಮಗೆ ರಕ್ಷಣೆ ಕೊಡಿ ಎಂದು ಎಸ್‍ಪಿ ಮೊರೆ ಹೋಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ನೀರಲಕೊಪ್ಪಾ ಗ್ರಾಮದ ಯುವತಿ ಬಿಸ್ಮಿಲ್ಲಾ ಬಾಗಲಕೋಟೆಯ ಹುನಗುಂದದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೇ ವೇಳೆ ಆಕೆ ವೀರೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗೆ ಸುಮಾರು 8 ತಿಂಗಳಿನಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು.
ನಮ್ಮಿರಿಬ್ಬರ ಪ್ರೀತಿ ವಿಚಾರ ನಮ್ಮ ಮನೆಯವರಿಗೆ ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ನಮ್ಮ ಮನೆಯವರು ಹೊಡೆಯೋದು, ಬಡಿಯೋದು ಮಾಡಿದ್ದಾರೆ. ಆತನ ಧರ್ಮ ಮತ್ತು ನಮ್ಮ ಧರ್ಮ ಬೇರೆ ಬೇರೆ ಆಗಿದ್ದು, ಆತನನ್ನು ಮದುವೆಯಾದರೆ ಇಬ್ಬರನ್ನು ಸುಮ್ನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಿಸ್ಮಿಲ್ಲಾ ಆರೋಪಿಸಿದ್ದಾಳೆ.
ಇದರಿಂದ ಗಾಬಾರಿಗೊಂಡ ಯುವತಿ ವೀರೇಶ್ ಜೊತೆ ಬೆಳಗಾವಿಗೆ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ಇದೀಗ ಇಬ್ಬರು ಕೊಪ್ಪಳದ ಎಸ್‍ಪಿ ಮೊರೆ ಹೋಗಿದ್ದು, ದಯವಿಟ್ಟು ನಮ್ಮನ್ನು ಬೇರೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಾನು ಮತ್ತು ಬಿಸ್ಮಿಲ್ಲಾ ಮದುವೆಯಾದ ತಕ್ಷಣ ಈಕೆಯ ಕಡೆಯವರು ನನ್ನ ವಿರುದ್ಧ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದರಿಂದ ನಾವು ಆತಂಕಗೊಂಡು ಕೊಪ್ಪಳ ಎಸ್‍ಪಿ ಕಚೇರಿಗೆ ಹೋಗಿ ಎಸ್‍ಪಿ ಅವರನ್ನು ಭೇಟಿ ಮಾಡಿ ರಕ್ಷಣೆ ಕೋರಿದ್ದೇವೆ. ನಾವೇನಾದರು ನಮ್ಮ ಊರಿಗೆ ಹೋದರೆ ಇಬ್ಬರ ಮನೆಯವರು ನಮ್ಮನ್ನು ಸುಮ್ನೆ ಬೀಡಲ್ಲ, ಪೊಲೀಸರೇ ನಮ್ಮನ್ನು ನೀವೇ ಕಾಪಾಡಿ ಎಂದು ವಿರೇಶ್ ಹೇಳಿದ್ದಾನೆ.