– ಸೊಸೆ ಮೇಲೆ ಕಣ್ಣಾಕಿದ ಮಾವ
– ಪತಿಯ ಜೊತೆ ಮಾತಾಡಿದ ನಂತ್ರ ನೇಣಿಗೆ ಶರಣು
ಹೈದರಾಬಾದ್: ಮಾವನ ಲೈಂಗಿಕ ಕಿರುಕುಳವನ್ನು ಸಹಿಸಲಾಗದೇ ಸೊಸೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಹೈದರಾಬಾದ್ನ ಸೈಫಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡ ಸೊಸೆ. ಬಶೀರ್ ಬಾಗ್ನ ಪೂಲ್ಬಾಗ್ ನಿವಾಸಿಯಾಗಿದ್ದ ಪ್ರಿಯಾಂಕಾ, ಗಾಂಧಿನಗರದ ನಿವಾಸಿ ರಮೇಶ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ತಮ್ಮ ಪ್ರೀತಿಯನ್ನು ಮನೆಯಲ್ಲಿ ತಿಳಿಸಿದ್ದರು. ನಂತರ ಎರಡು ಕುಟುಂಬದವರು ಇವರ ಪ್ರೀತಿಗೆ ಸಮ್ಮತಿಸಿ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹವಾದರು. ದಂಪತಿಯ ಸಂಸಾರ ತುಂಬಾ ಚೆನ್ನಾಗಿತ್ತು. ಈ ದಂಪತಿಗೆ ಏಳು ತಿಂಗಳ ಮಗು ಕೂಡ ಇದೆ.
Advertisement
Advertisement
ಮದುವೆಯಾದ ಕೆಲ ತಿಂಗಳ ಬಳಿಕ ಪತಿ ರಮೇಶ್ ತಂದೆ ವೆಂಕಟೇಶ್ ಸೊಸೆ ಪ್ರಿಯಾಂಕಾ ಮೇಲೆ ಕಣ್ಣಾಕಿದ್ದು, ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದ. ಈ ವಿಚಾರವನ್ನು ಆಕೆ ತನ್ನ ಕುಟುಂಬದವರಿಗೆ ತಿಳಿಸಿದ್ದಳು. ನಂತರ ಎರಡು ಕುಟುಂಬದ ಹಿರಿಯರು ಈ ಬಗ್ಗೆ ಪಂಚಾಯಿತಿ ಮಾಡಿದ್ದರು. ರಮೇಶ್ ತನ್ನ ಪತ್ನಿ ಪ್ರಿಯಾಂಕಾ ಮತ್ತು ಮಗು ತವರಿನ ನಿವಾಸದಲ್ಲಿ ಬಿಟ್ಟು ಹೋಗಿದ್ದನು.
Advertisement
Advertisement
ಆಕೆಯ ಪೋಷಕರು ಪೂಲ್ಬ್ಯಾಗ್ನ ಕ್ವಾರ್ಟರ್ಸ್ ನ 2ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಇದೇ ಕಟ್ಟದ 3ನೇ ಮಹಡಿಯಲ್ಲಿ ಆಕೆಯ ಸಹೋದರ ಕೂಡ ವಾಸಮಾಡುತ್ತಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪ್ರಿಯಾಂಕಾ ಸ್ವಲ್ಪ ಸಮಯದವರೆಗೆ ಪತಿಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾಳೆ. ನಂತರ ರೂಮಿಗೆ ಹೋಗಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ವಲ್ಪ ಸಮಯದ ನಂತರ ಪೋಷಕರು ಮನೆಗೆ ಬಂದು ಬಾಗಿಲು ಲಾಕ್ ಆಗಿರುವುದನ್ನು ನೋಡಿದ್ದಾರೆ. ನಂತರ ಎಷ್ಟೇ ಬಾಗಿಲು ಬಡಿದರೂ ಪ್ರಿಯಾಂಕಾ ಬಾಗಿಲು ತೆಗೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಪ್ರಿಯಾಂಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸದ್ಯಕ್ಕೆ ಪ್ರಿಯಾಂಕಾ ತಂದೆ ಸೈಫಾಬಾದ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ. ಪೊಲೀಸರು ಆಕೆಯ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುರಿಸಿದ್ದಾರೆ.