ರಾಯಚೂರು: ಪ್ರೇಮ ವಿವಾಹವನ್ನು ಮುರಿದು, ಯುವಕನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ಕು ಜನ ಆರೋಪಿಗಳು ಸೆರೆ ಸಿಕ್ಕಿದ್ದಾರೆ.
ರಾಜೇಶ್(26) ಮೃತ ಯುವಕ. ಸಿಂಧನೂರಿನ ಆರ್‍ಎಚ್ ಕ್ಯಾಂಪ್-1ರಲ್ಲಿ ಡಿಸೆಂಬರ್ 11ರ ರಾತ್ರಿ ವೇಳೆ ರಾಜೇಶ್‍ನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿ ಟಿಎಲ್‍ಬಿಸಿ ಕಾಲುವೆಯಲ್ಲಿ ಎಸೆಯಲಾಗಿತ್ತು. ಘಟನೆ ನಡೆದು ಹತ್ತು ದಿನಗಳ ಬಳಿಕ ಆರೋಪಿಗಳು ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಇದೇ ಗ್ರಾಮದ ಆರೋಗ್ಯ ಸ್ವಾಮಿ, ಪೀಟರ್ ಗೆರಾಲ್ಡ್, ಆರೋಗ್ಯ ಸ್ವಾಮಿ ಸೋಸು, ಸಗಯರಾಜು ಬಂಧಿತ ಆರೋಪಿಗಳು. ಪ್ರೇಮ ವಿವಾಹ ವಿಚಾರದಲ್ಲಿ ನಡೆದಿದ್ದ ಹಳೆ ಜಗಳ ಹಿನ್ನೆಲೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.
ಮೃತ ರಾಜೇಶ್ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದನು. ಆದರೆ ಈ ನಾಲ್ಕು ಜನ ಆರೋಪಿಗಳು ಅನ್ಯ ಧರ್ಮದ ಹೆಸರಿನಲ್ಲಿ ಮದುವೆಯನ್ನ ಮುರಿದು ಬೀಳುವ ಹಾಗೆ ಮಾಡಿದ್ದರು. ಇದರಿಂದ ಕುಪಿತನಾಗಿದ್ದ ರಾಜೇಶ್ ಆಗಾಗ ಆರೋಪಿಗಳೊಂದಿಗೆ ಜಗಳವಾಡುತ್ತಿದ್ದನು.
ಇದಕ್ಕೆ ಪ್ರತಿಯಾಗಿ ಹೊಂಚುಹಾಕಿ ನಾಲ್ಕು ಜನ ಆರೋಪಿಗಳು ರಾಜೇಶ್‍ನನ್ನ ಕೊಲೆಮಾಡಿ ಕಾಲುವೆಗೆ ಎಸೆದಿದ್ದಾರೆ. ಈ ಪ್ರಕರಣ ಭೇದಿಸಿರುವ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಕೊಲೆಗೆ ಬಳಸಿದ್ದ ಚಾಕು ಜಪ್ತಿ ಮಾಡಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆ ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ವಿಶೇಷ ತಂಡವನ್ನ ರಚಿಸಿದ್ದರು. ಸಿಂಧನೂರು ಸಿಪಿಐ ಬಾಲಚಂದ್ರ ಡಿ.ಲಕ್ಕಂ ನೇತೃತ್ವದಲ್ಲಿ ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‍ಐ ಜಿ.ಎಸ್.ರಾಘವೇಂದ್ರ ಒಳಗೊಂಡ ವಿಶೇಷ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.