ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ದಂಪತಿಯನ್ನು ಪೋಷಕರೇ ಬೇರೆ ಮಾಡಿದ್ದು, ಇದೀಗ ಪತಿ ತನ್ನ ಪತ್ನಿಗಾಗಿ ಪೊಲೀಸರ ಮೊರೆ ಹೋಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಭಾರತಿ ನಗರ ನಿವಾಸಿ ಜಿ.ವಿ.ಶ್ರೀಕಾಂತ್ ಪ್ರೀತಿಸಿದ ಪತ್ನಿಗಾಗಿ ಪರದಾಡುತ್ತಿದ್ದಾರೆ. ಶ್ರೀಕಾಂತ್ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪರಿಚಯವಾದ ದೇವನಹಳ್ಳಿ ಮೂಲದ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ನಂತರ ನವೆಂಬರ್ 2019ರಲ್ಲಿ ಆಂಧ್ರದ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದರು.
ಮಗಳನ್ನು ಪತ್ತೆ ಹಚ್ಚಿದ ಆಕೆಯ ಪೋಷಕರು, ಆರತಕ್ಷತೆ ಇಟ್ಟುಕೊಳ್ಳೋಣ ಅಲ್ಲಿಯವರೆಗೂ ನಮ್ಮ ಮನೆಗೆ ಕಳುಹಿಸಿ ಅಂತ ತಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ವಾರದ ನಂತರ ಇಬ್ಬರಿಗೂ ಸಂಪರ್ಕವಿಲ್ಲದ ಹಾಗೆ ಮಾಡಿದ್ದು. ನನ್ನ ಹೆಂಡತಿಯನ್ನು ಮನೆಯಲ್ಲಿ ಕೂಡಿಹಾಕಿ ಹಿಂಸೆ ಕೊಡುತ್ತಿದ್ದಾರೆ. ನನ್ನ ಪತ್ನಿಯನ್ನು ನನ್ನ ಜೊತೆ ಸೇರಿಸಿ ಎಂದು ಶ್ರೀಕಾಂತ್ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರ ಮೊರೆ ಹೋಗಿದ್ದಾರೆ.
ಶ್ರೀಕಾಂತ್ ಪತ್ನಿಯ ತಂದೆ-ತಾಯಿ, ಮನೆಯಲ್ಲಿದ್ದ ತಮ್ಮ ಮಗಳು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿ, ತನ್ನ ಸಹಪಾಠಿ ಜೊತೆ ಮದುವೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆಯಿಸಿ ರಾಜಿ ಪಂಚಾಯಿತಿ ಮೂಲಕ ತಮ್ಮ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಶ್ರೀಕಾಂತ್ ಬೆಂಬಲಕ್ಕೆ ಸ್ಥಳೀಯ ಕೆಲವು ಸಂಘ ಸಂಸ್ಥೆಗಳು ನಿಂತಿದ್ದು, ಪ್ರೇಮಿಗಳನ್ನು ಜೋಡಿ ಮಾಡಲು ಪೊಲೀಸರ ಮೊರೆ ಹೋಗಿದ್ದಾರೆ ಎಂದು ಸ್ಥಳೀಯ ಮುಖಂಡೆ ಶಶಿಕಲಾ ಹೇಳಿದ್ದಾರೆ.