– ಮದ್ವೆಯಾಗಿ ನಾಲ್ಕು ಮಕ್ಕಳಿದ್ರೂ ಅಪ್ರಾಪ್ತೆ ಹಿಂದೆ ಬಿದ್ದ
– ಕಾಪಾಡಲು ಬಂದ 17ರ ಅಪ್ರಾಪ್ತೆಯೂ ಸಾವು
ಲಕ್ನೋ: ಕೊರೊನಾ ವೈರಸ್‍ಗೆ ದೇಶವೇ ಲಾಕ್‍ಡೌನ್ ಆಗಿ 11 ದಿನಗಳ ಕಳೆದಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಜೋಡಿ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೃತರನ್ನು ಅಬ್ದುಲ್ ಕರೀಮ್ (26) ಮತ್ತು 17 ವರ್ಷದ ಹುಡುಗಿ ಎಂದು ಗುರುತಿಸಲಾಗಿದೆ. ಕರೀಮ್ ತನ್ನ ಅಪ್ರಾಪ್ತೆ ಪ್ರಿಯತಮೆಯನ್ನು ರಾತ್ರಿ ರಹಸ್ಯವಾಗಿ ಭೇಟಿ ಮಾಡಲು ಹೋದಾಗ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಇಬ್ಬರನ್ನು ಗೆಳತಿಯ ಕುಟುಂಬದವರು ಥಳಿಸಿ ಕೊಲೆ ಮಾಡಿದ್ದಾರೆ.
ಲಕ್ನೋದ ಸಾದತ್‍ಗಂಜ್ ಪ್ರದೇಶದ ನೌಬಸ್ತಾ ಕಾಲೋನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಕರೀಮ್ ತನ್ನ ಅಪ್ರಾಪ್ತೆ ಗೆಳತಿಯನ್ನು ಭೇಟಿ ಮಾಡಲು ಶನಿವಾರ ರಾತ್ರಿ ಆಕೆಯ ಮನೆಗೆ ರಹಸ್ಯವಾಗಿ ಹೋಗಿದ್ದಾನೆ. ಆದರೆ ಮನೆಯಲ್ಲಿ ಕರೀಮ್ ಇರುವ ಬಗ್ಗೆ ಹುಡುಗಿಯ ಕುಟುಂಬವರಿಗೆ ಗೊತ್ತಾಗಿದೆ.
ಆಗ ಹುಡುಗಿಯ ತಂದೆ ಉಸ್ಮಾನ್, ಸಹೋದರ ಡ್ಯಾನಿಶ್, ಚಿಕ್ಕಪ್ಪ ಸುಲೈಮಾನ್ ಮತ್ತು ಚಿಕ್ಕಪ್ಪನ ಮಗ ರಾಣು ನಾಲ್ವರು ಕರೀಮ್‍ನನ್ನು ಹಿಡಿದು ಥಳಿಸಿದ್ದಾರೆ. ಈ ವೇಳೆ ಕರೀಮ್‍ನನ್ನು ಕಾಪಾಡಲು 17 ವರ್ಷದ ಗೆಳತಿ ಅಡ್ಡ ಬಂದಿದ್ದಾಳೆ. ಆಗ ಕುಟುಂಬದವರು ಆಕೆಗೂ ಥಳಿಸಿದ್ದು, ಕೊನೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಕರೀಮ್‍ಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಆದರೂ ಅಪ್ರಾಪ್ತ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಗ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿಕಾಸ್ ಚಂದ್ರ ತ್ರಿಪಾಠಿ ತಿಳಿಸಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಇಬ್ಬರು ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದು, ಎರಡು ಕುಟುಂಬದವರಿಗೂ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.