– ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದು ಮನವಿ
ದಾವಣಗೆರೆ: ಎರಡು ಬಾರಿ ಮನೆಯವರು ದೂರ ಮಾಡಿದ್ದರೂ ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ. ಇದೀಗ ಈ ಜೋಡಿ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ನಡೆದಿದೆ.
ಹರಿಹರ ಪಟ್ಟಣದ ನಿವಾಸಿಯಾದ ಪವಿತ್ರಾ ಹಾಗೂ ಹರಪ್ಪನಹಳ್ಳಿ ತಾಲೂಕಿನ ಖಂಡೇಕೆರೆ ಗ್ರಾಮದ ಯುವಕ ಕೊಟ್ರೇಶ್ ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪವಿತ್ರಾ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗಳಾಗಿದ್ದು, ಈಕೆಯ ಮನೆ ಎದುರು ಜೆಸಿಬಿ ಚಾಲಕನಾಗಿದ್ದ ಕೊಟ್ರೇಶ್ ರೂಂ ಬಾಡಿಗೆ ಮಾಡಿಕೊಂಡಿದ್ದನು.
ಇವರಿಬ್ಬರ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನೆ ಬಿಟ್ಟು ಬೆಂಗಳೂರಿಗೆ ಹೋಗಿ ಇಬ್ಬರೂ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಬೆಂಗಳೂರಿನಲ್ಲಿರುವ ಮಾಹಿತಿ ಗೊತ್ತಾದ ಪವಿತ್ರಾ ಪೋಷಕರು, ಇಬ್ಬರು ಪ್ರೇಮಿಗಳನ್ನು ದೂರ ಮಾಡಿದ್ದಾರೆ. ಆದರೆ ಇಬ್ಬರು ಮತ್ತೆ ಮನೆ ಬಿಟ್ಟು ಬಂದಿದ್ದು, ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪವಿತ್ರಾ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಿಮ್ಮನ್ನು ಜೀವಂತವಾಗಿ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವಕ ಹೇಳಿದ್ದಾನೆ. ನನ್ನ ಸ್ವ-ಇಚ್ಛೆಯಿಂದ ನಾನು ಬಂದಿದ್ದೇನೆ. ಅಲ್ಲದೆ ನಾವು ಮದುವೆಯಾಗಿದ್ದೇವೆ. ನಮ್ಮ ಜೀವನದಲ್ಲಿ ನಾವು ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಯುವತಿ ಪೋಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾಳೆ.
ಅಲ್ಲದೆ ಯುವಕ ಕೊಟ್ರೇಶ್ ತಾಯಿ ಕೂಡ ಇವರ ಪ್ರೀತಿಯನ್ನು ಒಪ್ಪಿಕೊಂಡಿದ್ದು, ತಂದೆ ಇಲ್ಲದ ಮಗನನ್ನು ಕಷ್ಟ ಪಟ್ಟು ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದೇನೆ. ಈಗ ನನ್ನ ಮಗನ ಜೊತೆ ಪವಿತ್ರಾಳನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.