ಮುಂಬೈ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ನಗರದಲ್ಲಿ ನಡೆದಿದೆ.
ಸ್ವಾತಿ ವೇಮುಲು (21) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ತನ್ನ ಪ್ರಿಯಕರ ಸಾಯಿ ಚಂದ್ರ (25) ಮದುವೆಯಾಗಲು ನಿರಾಕರಿಸಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ವಾತಿ ಕಾಮತ್‍ಘರ್ ನಿವಾಸಿಯಾಗಿದ್ದು, ಬಾಲಾಜಿ ನಗರ ಮೂಲದ ಸಾಯಿ ಚಂದ್ರನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಸ್ವಾತಿ ಆಗಾಗ ತನ್ನ ಪ್ರಿಯಕರ ಚಂದ್ರನ ಬಳಿ ಮದುವೆಯಾಗುವಂತೆ ಕೇಳುತ್ತಿದ್ದಳು. ಆದರೆ ಪ್ರಿಯಕರ ಏನೇನೂ ನೆಪ ಹೇಳಿಕೊಂಡು ಮದುವೆಯಾಗುವುದನ್ನು ಮುಂದೂಡುತ್ತಿದ್ದನು.
ಇತ್ತೀಚೆಗೆ ಪದೇ ಪದೇ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾಳೆ. ಆಗ ಚಂದ್ರು ಮದುವೆಯಾಗಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ವಾದ-ವಿವಾದ ನಡೆದಿದೆ. ಇದರಿಂದ ನೊಂದ ಸ್ವಾತಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸಾಯಿ ಚಂದ್ರನನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.