– ಪ್ರಿಯಕರ, 2 ಮಕ್ಕಳ ಜೊತೆ ಪತ್ನಿ ಪತ್ತೆ
– ಪೊಲೀಸರ ಮುಂದೆ ಮುಗ್ಧ ಎಂದು ಸಾಬೀತು ಪಡಿಸಿದ
ಭುವನೇಶ್ವರ: ವ್ಯಕ್ತಿಯೊಬ್ಬ ಪತ್ನಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದನು. ನಂತರ ತಾನೂ ತಪ್ಪು ಮಾಡಿಲ್ಲವೆಂದು ಸಾಬೀತುಪಡಿಸಲು ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ಪೊಲೀಸರ ಮುಂದೆ ತಂದು ನಿಲ್ಲಿಸಿರುವ ಘಟನೆ ಒಡಿಶಾದ ಪಟ್ಕುರಾದ ಚೌಲಿಯಾ ಗ್ರಾಮದಲ್ಲಿ ನಡೆದಿದೆ.
ಅಭಯ್ ಸುತಾರ್ ಪತ್ನಿಯನ್ನ ಕೊಲೆ ಮಾಡಿದ್ದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಸೋಮವಾರ ಪುರಿ ಜಿಲ್ಲೆಯ ಪಿಪಿಲಿ ಪ್ರದೇಶದಲ್ಲಿ ಆತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದ ನಂತರ ಆತ ತಪ್ಪಿತಸ್ಥನಲ್ಲ ಎಂದು ಸಾಬೀತಾಗಿದೆ.
Advertisement
Advertisement
ಏನಿದು ಪ್ರಕರಣ?
ಪಟ್ಕುರಾದ ಚೌಲಿಯಾ ಗ್ರಾಮದ ನಿವಾಸಿ ಅಭಯ್ ಸುತಾರ್ ಫೆಬ್ರವರಿ 7, 2013 ರಂದು ಸಮಗೋಲಾ ಗ್ರಾಮದ ಇತಿಶ್ರೀಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ಕೇವಲ ಎರಡು ತಿಂಗಳಿಗೆ ಇತಿಶ್ರೀ ಮನೆಯಿಂದ ನಾಪತ್ತೆಯಾಗಿದ್ದಳು. ಅಭಯ್ ತೀವ್ರ ಹುಡುಕಾಟ ನಡೆಸಿದರೂ ಇತಿಶ್ರೀ ಪತ್ತೆಯಾಗಿರಲಿಲ್ಲ. ಕೊನೆಗೆ 2013 ಏಪ್ರಿಲ್ 20, ರಂದು ಪಟ್ಕುರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದನು.
Advertisement
Advertisement
ಇತ್ತ ಇತಿಶ್ರೀ ತಂದೆ ಪ್ರಹಲ್ಲಾದ್ ಮೊಹರಾನಾ, ವರದಕ್ಷಿಣೆಗಾಗಿ ತನ್ನ ಮಗಳಿಗೆ ಪತಿ ಹಿಂಸೆ ಕೊಡುತ್ತಿದ್ದನು. ಅಲ್ಲದೇ ಆತನೇ ಮಗಳನ್ನು ಕೊಲೆ ಮಾಡಿ ದೇಹವನ್ನು ಯಾರಿಗೂ ತಿಳಿಯದಂತೆ ಹೂತಿದ್ದಾನೆಂದು ಎಂದು ಅಭಯ್ ವಿರುದ್ಧ ದೂರು ದಾಖಲಿಸಿದ್ದರು. ಇತಿಶ್ರೀ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಅಭಯ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಜೈಲಿನಲ್ಲಿದ್ದ ನಂತರ ಜಾಮೀನಿನ ಮೇಲೆ ಅಭಯ್ ಬಿಡುಗಡೆಯಾಗಿದ್ದಾನೆ.
ಪ್ರಿಯಕರನೊಂದಿಗೆ ಪತ್ನಿ ಪತ್ತೆ:
ಜೈಲಿನಿಂದ ಬಿಡುಗಡೆಯಾದ ನಂತರ ಅಭಯ್, ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ಇತಿಶ್ರೀಯನ್ನು ಪತ್ತೆ ಮಾಡಿ ತಾನು ಮುಗ್ಧ ಎಂದು ಸಾಬೀತುಪಡಿಸಲು ನಿರ್ಧರಿಸಿದ್ದನು. ಅದರಂತೆಯೇ ಪತ್ನಿ ಪ್ರಿಯಕರನೊಂದಿಗೆ ಓಡಿಹೋಗಿರಬಹುದು ಎಂದು ಶಂಕಿಸಿ ನಿರಂತರವಾಗಿ ಪತ್ನಿಗಾಗಿ ಹುಡುಕಾಟ ನಡೆಸಿದ್ದಾನೆ. ಕೊನೆಗೆ ಇತಿಶ್ರೀ ಪಿಪಿಲಿ ಎಂಬ ಪ್ರದೇಶದಲ್ಲಿ ಪ್ರಿಯಕರನೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ.
ಕೂಡಲೇ ಅಭಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಇತಿಶ್ರೀ ಮತ್ತು ಆಕೆಯ ಪ್ರಿಯಕರ ರಾಜೀವ್ ಇಬ್ಬರನ್ನೂ ಬಂಧಿಸಿ, ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಇತಿಶ್ರೀ, ನಾನು ಮದುವೆಗೂ ಮುನ್ನವೇ ರಾಜೀವ್‍ನನ್ನು ಪ್ರೀತಿ ಮಾಡುತ್ತಿದ್ದು, ಆತನೊಂದಿಗೆ ಸಂಬಂಧ ಹೊಂದಿದ್ದೆ. ಆದರೆ ನನ್ನ ಪೋಷಕರು ನಮ್ಮ ಪ್ರೀತಿಯನ್ನು ಒಪ್ಪಲಿಲ್ಲ. ಕೊನೆಗೆ ಅಭಯ್‍ನನ್ನು ಮದುವೆಯಾಗುವಂತೆ ಒತ್ತಾಯಿಸಿ ವಿವಾಹ ಮಾಡಿಸಿದ್ದರು ಎಂದು ಹೇಳಿದ್ದಾಳೆ.
ಮದುವೆಯಾದ ಎರಡು ತಿಂಗಳ ನಂತರ ಇತಿಶ್ರೀ ಪತಿಯ ಮನೆಯಿಂದ ರಾಜೀವ್ ಜೊತೆ ಓಡಿಹೋಗಿದ್ದಳು. ಇಬ್ಬರೂ ಗುಜರಾತ್‍ಗೆ ಓಡಿಹೋಗಿ ಏಳು ವರ್ಷಗಳ ಕಾಲ ಅಲ್ಲಿಯೇ ಇದ್ದರು. ಇವರಿಬ್ಬರಿಗೆ ಇಬ್ಬರೂ ಮಕ್ಕಳು ಕೂಡ ಇದ್ದರು. ಇತ್ತೀಚೆಗೆ ದಂಪತಿ ಒಡಿಶಾಗೆ ವಾಪಸ್ ಬಂದಿದ್ದಾರೆ. ರಾಜೀವ್ ಭುವನೇಶ್ವರದಲ್ಲಿ ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಇತಿಶ್ರೀಯನ್ನು ಪತ್ತೆ ಹಚ್ಚಲು ವಿಫಲರಾದ ಹಿನ್ನೆಲೆಯಲ್ಲಿ ನಾನೇ ಆಕೆಯನ್ನು ಹುಡುಕಬೇಕು ಎಂದು ನಿರ್ಧರಿಸಿದ್ದೆ. ಈ 7 ವರ್ಷಗಳಲ್ಲಿ ನಾನು ಅನೇಕ ಹಳ್ಳಿಗಳಲ್ಲಿ ಹುಡುಕಾಟ ನಡೆಸಿದ್ದೆ. ಇದೀಗ ನನ್ನ ಮುಗ್ಧತೆಯನ್ನು ನಾನು ಸಾಬೀತು ಪಡಿಸಿದ್ದೇನೆ. ನಾನು ಸಂತೃಪ್ತ ವ್ಯಕ್ತಿಯಾಗಿದ್ದೇನೆಂದು ಅಭಯ್ ಹೇಳಿದ್ದಾನೆ.