ಚಂಡೀಗಢ: ಪೋಷಕರು ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಂಜಾಬ್ ರಾಜ್ಯದ ಪಟಿಯಾಲದ ಗಿವೋರಾ ಗ್ರಾಮದಲ್ಲಿ ನಡೆದಿದೆ.
ತಂದೆ ಮತ್ತು ಸೋದರನಿಂದಲೇ ಯುವತಿ ಜ್ಯೋತಿ ಕೊಲೆಯಾಗಿದ್ದಾಳೆ. ಮನಜಿತ್ ಸಿಂಗ್ ಪುತ್ರಿಯಾದ ಜ್ಯೋತಿ ಅದೇ ಗ್ರಾಮದ ಗುರಜಂಟ್ ಸಿಂಗ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗುತ್ತಲೇ ಎರಡು ತಿಂಗಳ ಹಿಂದೆ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು.

ಎರಡು ಕುಟುಂಬಗಳ ಸದಸ್ಯರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ ಸ್ಥಳದಲ್ಲಿಯೇ ವಿಚ್ಛೇದನ ಕೊಡಿಸಿದ್ದರು. ಜುಲೈ 14ರಂದು ಜ್ಯೋತಿ ಪತಿಯ ಮನೆಗೆ ಹೋಗಿದ್ದಳು. ವಿಷಯ ತಿಳಿದು ಜ್ಯೋತಿ ಪೋಷಕರು ಆಕೆಯನ್ನು ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿ ರಾತ್ರೋ ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿವೆ.
ಪತಿ ಗುರಜಂಟ್ ಸಿಂಗ್ ದೂರಿನ ಅನ್ವಯ ಯುವತಿಯ ತಂದೆ ಮನಜಿತ್ ಸಿಂಗ್ ಮತ್ತು ಸೋದರ ಜಿಂದರ್ ಸಿಂಗ್ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ರಾತ್ರಿಯ ಜ್ಯೋತಿಯ ಮೃತದೇಹವನ್ನು ದಹಿಸಿದ್ದರಿಂದ ಘಟನಾ ಸ್ಥಳದಲ್ಲಿಯ ಅಸ್ಥಿಯನ್ನು ವಶಕ್ಕೆ ಪಡೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಸ್‍ಪಿ ಜಸ್ವಂತ್ ಸಿಂಗ್ ತಿಳಿಸಿದ್ದಾರೆ.
ಜುಲೈ 14ರಂದು ಜ್ಯೋತಿ ನಮ್ಮ ಮನೆಗೆ ಬಂದಿದ್ದಾಳೆಂದು ನೆರೆಹೊರೆಯವರು ಫೋನ್ ಮಾಡಿ ತಿಳಿಸಿದ್ದರು. ಭಯಗೊಂಡಿದ್ದ ಜ್ಯೋತಿ ಕೆಲ ಸಮಯದ ಬಳಿಕ ಹಿಂದಿರುಗಿದ್ದಳು. ಭಾನುವಾರ ರಾತ್ರಿ ಜ್ಯೋತಿ ಮನೆಯ ಮಾರ್ಗದಲ್ಲಿ ಹೋಗುತ್ತಿರುವಾಗ ಜೋರಾಗಿ ಕಿರುಚಿದ ಸದ್ದು ಕೇಳಿತು. ಅನುಮಾನಗೊಂಡ ಮನೆಯತ್ತ ಇಣುಕಿದಾಗ, ತಂದೆ ಆಕೆಯ ಕಾಲನ್ನು ಬಿಗಿಯಾಗಿ ಹಿಡಿದಿದ್ದರೆ, ಸೋದರ ಕತ್ತು ಹಿಸುಕುತ್ತಿದ್ದನು. ಕೆಲವೇ ಕ್ಷಣಗಳಲ್ಲಿ ಜ್ಯೋತಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ತಂದೆ-ಮಗ ಶವವನ್ನು ಹಾಸಿಗೆಯಲ್ಲಿ ಸುತ್ತಿ ಬೈಕ್ ಮೂಲಕ ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದರು ಎಂದು ಗುರಜಂಟ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.