– ನೀನು ಹೇಗೆ ಇದ್ರೂ ನಾನ್ ಪ್ರೀತಿಸ್ತೀನಿ
– ಕಣ್ಣೀರು ತರಿಸೋ ನಿಜವಾದ ಪ್ರೇಮ ಕಥೆ
ತಿರುವನಂತಪುರಂ: ಯುವಕನೊಬ್ಬ ತನ್ನ ಶಿಕ್ಷಣದ ಕನಸನ್ನೇ ಬಿಟ್ಟು ಕೂಲಿ ಕೆಲಸ ಮಾಡಿ, ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪ್ರಿಯತಮೆಯನ್ನು ಗುಣಪಡಿಸಿದ್ದಾನೆ. ಇಂದು ಈ ಪ್ರೇಮಿಗಳು ಮದುವೆಯಾಗಿ ಸಂತಸದಿಂದ ಜೀವನ ನಡೆಸುತ್ತಿದ್ದಾರೆ.
ಕೇರಳದ ಮಲಪ್ಪೂರಂನ ಸಚಿನ್ ಮತ್ತು ಭವ್ಯಾ ಪ್ರೇಮಿಗಳು ಕ್ಯಾನ್ಸರ್ ಗೆದ್ದು ಮದುವೆಯಾಗಿದ್ದಾರೆ. ಸಚಿನ್ ಮತ್ತು ಭವ್ಯಾ ಇಬ್ಬರಿಗೂ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾಗ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು ಒಳ್ಳೆಯ ಫ್ರೆಂಡ್ಸ್ ಆಗಿದ್ದು, 8 ತಿಂಗಳವರೆಗೂ ಇವರ ಸ್ನೇಹ ಮುಂದುವರಿಯಿತು. ಆದರೆ ಇವರಿಬ್ಬರ ಸ್ನೇಹವನ್ನು ಭವ್ಯಾ ಪೋಷಕರು ಅಪಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಇನ್ಮುಂದೆ ಸಚಿನ್ ಜೊತೆ ಮಾತಾಡಬಾರದೆಂದು ಎಚ್ಚರಿಕೆ ಕೂಡ ಕೊಟ್ಟಿದ್ದರು.
Advertisement
Advertisement
ಪೋಷಕರ ಮಾತಿಗೆ ಬೆಲೆ ಕೊಟ್ಟ ಭವ್ಯಾ, ಸಚಿನ್ ಜೊತೆ ಮಾತಾಡುವುದನ್ನು ನಿಲ್ಲಿಸಿದ್ದಳು. ಈ ವೇಳೆ ಸಚಿನ್ ಮತ್ತು ಭವ್ಯಾ ಒಬ್ಬರಿಗೊಬ್ಬರು ಬಿಟ್ಟಿರಲಾರದೆ ಮತ್ತೆ ಮಾತನಾಡಲು ಶುರು ಮಾಡಿದರು. ಆಗ ಅವರಿಬ್ಬರಿಗೆ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದು ಅರಿವಾಗಿದೆ. ನಂತರ ಮನೆಯವರಿಗೆ ತಿಳಿಯದಂತೆ ಭೇಟಿಯಾಗುತ್ತಿದ್ದರು. ಶಿಕ್ಷಣ ಮುಗಿದ ಬಳಿಕ ಭವ್ಯಾ ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲವು ದಿನಗಳ ನಂತರ ಭವ್ಯಾಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಮೊದಲು ಭವ್ಯಾ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನೋವು ಹೆಚ್ಚಾದ ಕಾರಣ ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದಾಳೆ. ಆಗ ಭವ್ಯಾಗೆ ಬೆನ್ನುಮೂಳೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.
Advertisement
ಈ ವಿಚಾರವನ್ನು ತಿಳಿದು ಭವ್ಯಾ ದುಃಖಿತಳಾಗಿದ್ದಳು. ಆಗ ಸಚಿನ್, ಭವ್ಯಾಳಿಗೆ ಧೈರ್ಯ ತುಂಬಿದ್ದಾನೆ. ನಿನ್ನ ಜೊತೆ ನಾನಿದ್ದೇನೆ. ಹಣ ಎಷ್ಟಾದರೂ ಖರ್ಚು ಆಗಲಿ. ನಿನ್ನನ್ನು ನಾನು ಉಳಿಸಿಕೊಳ್ಳುತ್ತೇನೆ, ಭಯಪಡಬೇಡ ಎಂದು ಭರವಸೆ ನೀಡಿದ್ದಾನೆ. ಕೊನೆಗೆ ಸಚಿನ್ ಭವ್ಯಾ ಮನೆಯವರಿಗೂ ತಿಳಿಯದಂತೆ ಆಕೆಯನ್ನು ಆಸ್ಪತ್ರೆಗೆ ಪ್ರತಿವಾರ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ, ಪ್ರಾಥಮಿಕ ಚಿಕಿತ್ಸೆ ಕೊಡಿಸುತ್ತಿದ್ದನು. ಒಂದು ದಿನ ಈ ವಿಚಾರ ಮನೆಯವರಿಗೆ ತಿಳಿದಿದೆ. ಮಗಳಿ ಕ್ಯಾನ್ಸರ್ ಇರುವ ಬಗ್ಗೆ ತಿಳಿದು ಆಘಾತಗೊಂಡಿದ್ದರು. ಕೊನೆಗೆ ಸಚಿನ್ ಒಳ್ಳೆಯ ಗುಣವನ್ನು ನೋಡಿ ಭವ್ಯಾ ಪೋಷಕರು ಮೆಚ್ಚಿಕೊಂಡಿದ್ದರು.
Advertisement
ಸಚಿನ್, ಭವ್ಯಾಳನ್ನು ಬಿಟ್ಟು ಒಂದು ಕ್ಷಣವೂ ಎಲ್ಲೂ ಹೋಗುತ್ತಿರಲಿಲ್ಲ. ಸದಾ ಆಕೆಯ ಜೊತೆ ಇದ್ದುಕೊಂಡು ಧೈರ್ಯ ಹೇಳುತ್ತಿದ್ದನು. ಕೊನೆಗೆ ಕ್ಯಾನ್ಸರ್ ಇದ್ದರೂ ಕಳೆದು ವರ್ಷ ಮಾರ್ಚ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭವ್ಯಾಗೆ ದಿನ ಕಳೆದಂತೆ ತಲೆ ಕೂದಲು ಉದುರಲು ಆರಂಭಿಸಿತು. ಆಗ ಭವ್ಯಾ ಅದನ್ನು ನೋಡಿ ನೋವು ಪಡುತ್ತಿದ್ದಳು. ಈ ವೇಳೆ ಸಚಿನ್, ಪ್ರೀತಿ ಎಂಬುದು ಮನಸ್ಸಿಗೆ ಸಂಬಂಧಿಸಿರುತ್ತದೆ. ದೈಹಿಕವಾಗಿ ಅಲ್ಲ. ನೀನು ಹೇಗೆ ಇದ್ದರೂ ಯಾವಾಗಲೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಧೈರ್ಯ ತುಂಬಿದ್ದನು.
ಭವ್ಯಾ ತಿಂಗಳಲ್ಲಿ ಸುಮಾರು 10 ದಿನ ಆಸ್ಪತ್ರೆಯಲ್ಲಿಯೇ ಇರಬೇಕಾಗಿತ್ತು. ಕೊನೆಗೆ ಸಚಿನ್ ಮತ್ತು ಭವ್ಯಾ ಸೆಪ್ಟೆಂಬರ್ ತಿಂಗಳಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಪೋಷಕರ ಅನುಮತಿ ಪಡೆದ ನಂತರ ಪ್ರೇಮಿಗಳು ಮದುವೆಯಾದರು. ನಾನು ಯಾವಾಗಲೂ ಅವಳೊಂದಿಗೆ ಇದ್ದರೆ ಸಂತೋಷವಾಗಿರುತ್ತಾಳೆ. ಹೀಗಾಗಿ ನಾನು ಮದುವೆಯಾದೆ ಎಂದು ಸಚಿನ್ ಹೇಳಿದ್ದನು.
ಸಚಿನ್ ಸ್ನಾತಕೋತ್ತರ ಪದವಿಯನ್ನು ಮಾಡಬೇಕೆಂಬ ಕಸನು ಕಂಡಿದ್ದನು. ಆದರೆ ತನ್ನ ಪ್ರಿಯತಮೆಗಾಗಿ ಆ ಕನಸ್ಸನ್ನು ಬಿಟ್ಟು ಆಕೆಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ದೈನಂದಿನ ಕೂಲಿ ಕೆಲಸ ಮಾಡುತ್ತಿದ್ದನು. ಆದರೆ ಭವ್ಯಾ ಚಿಕಿತ್ಸೆ ಅಧಿಕ ಹಣ ಬೇಕಾಗಿತ್ತು. ಇತ್ತ ಆಕೆಯ ಮನೆಯವರು ಆರ್ಥಿಕವಾಗಿ ದುರ್ಬಲರಾಗಿದ್ದರು. ಕೊನೆಗೆ ಅವರ ಮದುವೆಗೆ ಬಂದವರು ಹಣದ ಸಹಾಯ ಮಾಡಿದರು. ನಂತರ ಸ್ನೇಹಿತರು, ಪರಿಚಯಸ್ಥರು ಮತ್ತು ಕುಟುಂಬದವರು ಸಹಾಯ ಮಾಡಿದರು. ಕೊನೆಗೆ ಸಚಿನ್, ಭವ್ಯಾಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದಾನೆ.
ಇತ್ತೀಚೆಗೆ ಭವ್ಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಸುಧಾರಿಸಿಕೊಳ್ಳುತ್ತಿದ್ದಾಳೆ. “ನಮ್ಮ ಸ್ನೇಹಿತರು ನಮಗೆ ಸಾಕಷ್ಟು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಸಚಿನ್ ಮತ್ತು ಭವ್ಯಾ ತಮ್ಮ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.