ಕಾಲೇಜ್ ಮುಗಿದ್ಮೇಲೆಯೇ ಪ್ರೀತಿಸಿದವನ ಜೊತೆ ಮದ್ವೆ- ಯುವತಿ ನೇಣಿಗೆ ಶರಣು

Public TV
1 Min Read
Why Marriage is so important 1 1

ಮಡಿಕೇರಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದಲ್ಲಿ ನಡೆದಿದೆ.

ಪೂಜಾ (17) ಮೃತ ಯುವತಿ. ಪೂಜಾ ಕಳೆದ ಎರಡು ವರ್ಷಗಳಿಂದ ಕೂಡೂರು ಗ್ರಾಮದ ಯುವಕ ಪವನ್‍ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದ ಪೋಷಕರು ಇವಳನ್ನು ಸುಳ್ಯದ ಕಾಲೇಜ್‍ವೊಂದರಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು. ವಿದ್ಯಾಭ್ಯಾಸ ಮುಂದುವರಿಸು ನಂತರ ಪ್ರೀತಿಸಿದ ಹುಡುಗನ ಜೊತೆಯೇ ಮದುವೆ ಮಾಡಿಕೊಡುವುದಾಗಿ ಪೋಷಕರು ಮಗಳಿಗೆ ಬುದ್ಧಿ ಹೇಳಿ ಕಾಲೇಜಿಗೆ ಕಳಿಸಿದ್ದರು. ಆದರೆ ಆಕೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡಲಿಲ್ಲ.

love

ಕೊನೆಗೆ ಪೋಷಕರು ಅವಳ ವಿದ್ಯಾಭ್ಯಾಸ ನಿಲ್ಲಿಸಿ ಅವಳನ್ನು ಕರೆದುಕೊಂಡು ಬಂದು ಮನೆಯಲ್ಲಿ ಇರಿಸಿದ್ದರು ಎನ್ನಲಾಗಿದೆ. ಆದರೆ ಇದರಿಂದ ಬೇಸತ್ತ ಯುವತಿ ಮಂಗಳವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೊಠಡಿಯಲ್ಲಿ ವೇಲ್‍ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ವೇಳೆ ಕೆಲಸಕ್ಕೆ ಹೋಗಿದ್ದ ಪೋಷಕರು ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪೋಷಕರು ಈ ಕುರಿತು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣಾಧೀಕಾರಿ ನಂದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಜರ್ ಮಾಡಿದ್ದಾರೆ. ಬಳಿಕ ಕುಶಾಲನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗರಕ್ಕೆ ಮೃತ ದೇಹವನ್ನು ರವಾನಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *