– 1 ವರ್ಷದಿಂದ ಪ್ರೀತಿ ಮಾಡಿ ರಹಸ್ಯ ವಿವಾಹ
– ಇನಿಯನಿಗಾಗಿ ಕಾದು ಕುಳಿತ ಪ್ರಿಯತಮೆ
ಹಾಸನ: ಪಕ್ಕದ ಮನೆ ಹುಡುಗಿಯನ್ನು ಯುವಕನೊಬ್ಬ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡಿ ಬಳಿಕ ರಹಸ್ಯವಾಗಿ ವಿವಾಹವಾಗಿ ಈಗ ದುಬೈಗೆ ತೆರಳಿ ವಂಚಿಸಿದ್ದಾನೆ.
ಆಲೂರು ತಾಲೂಕು ಕಾಡ್ಲೂರು ಗ್ರಾಮದ ಹಿತನ್ ಅದೇ ಊರಿನ ಯುವತಿಗೆ ವಂಚಿಸಿ ಪರಾರಿಯಾಗಿದ್ದಾನೆ. ಹಿತನ್ ಎಂಬಿಎ ವ್ಯಾಸಂಗ ಮಾಡಿದ್ದು, ಯುವತಿ ನೆರೆ ಮನೆಯವಳಾಗಿದ್ದಾಳೆ. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ವಿಷಯ ಎರಡೂ ಮನೆಯವರಿಗೆ ತಿಳಿದಿರಲಿಲ್ಲ.
ಈ ಮಧ್ಯೆ ಯುವತಿಗೆ ಬೇರೊಬ್ಬ ಯುವಕನ ಜೊತೆ ಕಳೆದ ಅಕ್ಟೋಬರ್ 14 ರಂದು ನಿಶ್ಚಿತಾರ್ಥವಾಗಿತ್ತು. ಆಗಲೂ ಇವರಿಬ್ಬರ ಪ್ರೀತಿ ವಿಷಯ ಗುಟ್ಟಾಗಿಯೇ ಇತ್ತು. ಇದಾದ ಬಳಿಕ ಅದೇ ಊರಿನ ದೇವಾಲಯದಲ್ಲಿ ನವೆಂಬರ್ 18 ರಂದು ಇಬ್ಬರೂ ಕದ್ದು ಮುಚ್ಚಿ ಮದುವೆಯಾಗಿದ್ದರು. ನಿನೇ ನನ್ನ ಪ್ರಾಣ, ನಿನ್ನನ್ನೇ ನಾನು ಪ್ರೀತಿಸುತ್ತೇನೆ ಎಂದು ಹೇಳಿ ಹಿತನ್ ಯುವತಿಯ ಕೊರಳಿಗೆ ಅರಿಶಿಣ ಕೊನೆ ಕಟ್ಟಿದ್ದನು. ಇದಾದ ಬಳಿಕ ಕೆಲಸಕ್ಕೆ ಸಿಕ್ಕಿದೆ ಎಂದು ದುಬೈಗೆ ಹಿತನ್ ತೆರಳಿದ್ದಾನೆ.
ಇಬ್ಬರು ಪ್ರೀತಿಸಿ ಮದುವೆಯಾಗಿದ್ದೇವು. ನನಗೆ ಹೇಳಿ ದುಬೈಗೆ ಹೋಗಿದ್ದಾರೆ. ಆದರೆ ದುಬೈಗೆ ಹೋದ ಬಳಿಕ ಇಬ್ಬರ ಪ್ರೀತಿ, ಮದುವೆ ಗುಟ್ಟು ರಟ್ಟಾಗಿ ಮನೆಯವರು ಬೈದಿದ್ದಾರೆ ಎಂಬ ಕಾರಣಕ್ಕೆ ಹಿತನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಮನೆಯವರೆಲ್ಲ ಆತನಿಗೆ ಬೆದರಿಸಿದ್ದಾರೆ. ಆದ್ದರಿಂದ ಆತ ನನ್ನ ಕರೆಗೂ ಸಿಗುತ್ತಿಲ್ಲ. ನಾನು ವಾಪಸ್ ಬಂದು ಮದುವೆಯಾಗುತ್ತೇವೆ ಎಂದು ಹೇಳಿದ್ದರು ಎಂದು ನೊಂದ ಯುವತಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಇತ್ತ ಯುವತಿಗೆ ಬೇರೊಬ್ಬ ಯುವಕನ ಜೊತೆಗೆ ಆಗಿದ್ದ ನಿಶ್ಚಿತಾರ್ಥವೂ ಮುರಿದು ಬಿದ್ದಿದೆ. ಇದರಿಂದ ಸಹಜವಾಗಿಯೇ ಯುವತಿ ಹಾಗೂ ಪೋಷಕರು ಕಂಗಾಲಾಗಿದ್ದಾರೆ. ನಮಗೆ ನ್ಯಾಯ ಬೇಕು. ಮಗಳಿಗೆ ಮಹಾ ಮೋಸ ಮಾಡಿರುವ ಹಿತನ್ ಮರಳಿ ಬಂದು ಮಗಳಿಗೆ ಬಾಳು ಕೊಡಬೇಕು ಎಂದು ಪೋಷಕರು ಕಣ್ಣೀರಿಟ್ಟು ಮನವಿ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv