ಧಾರವಾಡ: ಕಾಡಿಬೇಡಿ ಯುವತಿಯನ್ನು ಪ್ರೀತಿಸಿ ಮದುವೆಯಾದ ಯುವಕನೊಬ್ಬ ಎರಡನೇ ದಿನಕ್ಕೆ ಹುಡುಗಿಯನ್ನು ನಡುದಾರಿಯಲ್ಲಿಯೇ ಕೈ ಬಿಟ್ಟ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ನಡೆದಿದೆ.
ಕಲ್ಮೇಶ್ ಬೊರಶೆಟ್ಟಿ ಯುವತಿಗೆ ಕೈಕೊಟ್ಟ ಯುವಕ. ಕಳೆದ ಎರಡು ವರ್ಷದಿಂದ ಕಲ್ಮೇಶ್ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಮೊದ ಮೊದಲು ಯುವತಿ ಪ್ರೀತಿಯ ನಾಟಕಕ್ಕೆ ಕರಗಿರಲಿಲ್ಲ. ನಂತರ ಕಲ್ಮೇಶ್ ಯುವತಿಗೆ ಕಾಡಿಬೇಡಿ ಲವ್ ಮಾಡಿದ್ದನು. ಬಳಿಕ ಕಲ್ಮೇಶ್ ಯುವತಿಯನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ಆಗ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕಲ್ಮೇಶ್ ವಿಷ ಕುಡಿಯಲು ಯತ್ನಿಸಿದ್ದು, ಬೇರೆಯವರ ಜೊತೆ ಯುವತಿ ಮದುವೆಯಾಗಲು ಬಿಡದೆ ತಿರುಪತಿಗೆ ಕರೆದೊಕೊಂಡು ಹೋಗಿ ಮದುವೆಯಾಗಿದ್ದಾನೆ.
ಮದುವೆಯಾಗಿ ಎರಡು ದಿನ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಕಾಲಕಳೆದ ಕಲ್ಮೇಶ್ ಬಳಿಕ ಹುಬ್ಬಳ್ಳಿಗೆ ಕರೆ ತಂದು ಬಿಟ್ಟು ಪರಾರಿಯಾಗಿದ್ದಾನೆ. ಕಲ್ಮೇಶ್ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ. ಯುವಕನ ಮನೆಯವರಿಂದ ಮದುವೆಗೆ ವಿರೋಧವಿದೆ. ಯುವಕನ ತಾಯಿಯ ವಿರೋಧಕ್ಕೆ ಹೆದರಿ ಯುವತಿಯನ್ನ ಕೈ ಬಿಟ್ಟಿದ್ದಾನೆ ಎಂದು ಆಕೆಯ ಪೋಷಕರು ಆರೋಪಿಸುತ್ತಿದ್ದಾರೆ.
ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ರಾಜಕೀಯ ಒತ್ತಡದಿಂದ ಪ್ರಕರಣ ದಾಖಲು ಮಾಡಿಕೊಳ್ಳಲು ಬಿಡುತ್ತಿಲ್ಲ. ಯಾಕಂದ್ರೆ ಯುವಕನ ತಾಯಿ ಶಿವಲೀಲಾ ಬೋರಶೆಟ್ಟಿ ನವಲಗುಂದ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷೆಯಾಗಿದ್ದಾರೆ. ಹೀಗಾಗಿ ಪ್ರಕರಣ ದಾಖಲಾಗದಂತೆ ವಂಚಕ ಕಲ್ಮೇಶ್‍ನ ತಾಯಿ ಶಿವಲೀಲಾ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಪತಿಗಾಗಿ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ‘ನನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ, ನನ್ನ ಗಂಡನನ್ನ ಹುಡುಕಿಕೊಡಿ’ ಎಂದು ಮನವಿ ಮಾಡಿಕೊಳ್ಳುತ್ತಿದ್ದಾಳೆ. ಮದುವೆಯಾಗಿ ನಾಪತ್ತೆಯಾದ ಹುಡುಗನಿಗಾಗಿ ಯುವತಿಯ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ.