ರಾಯಚೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಇನ್ನೊಂದು ಮದುವೆ ಮಾಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಾಣದಾಳ ಗ್ರಾಮ ಹೊರವಲಯದಲ್ಲಿ ನಡೆದಿದೆ.
ಸಾವಿಗೂ ಮುನ್ನ ಯುವಕ ಭೀಮೇಶ್ ಫೇಸ್ ಬುಕ್‍ನಲ್ಲಿ ಆತ್ಮಹತ್ಯೆ ಬಗ್ಗೆ ಹೇಳಿಕೊಂಡಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ಇಡಪನೂರು ಪಿಎಸ್‍ಐ ಗಂಗಪ್ಪ ಹಾಗೂ ಯುವತಿ ಮನೆಯವರೇ ಕಾರಣ ಎಂದು 11 ಜನರ ಹೆಸರನ್ನು ಬರೆದಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿಂದು 851 ಹೊಸ ಕೊರೊನಾ ಕೇಸ್- 790 ಡಿಸ್ಚಾರ್ಜ್, 15 ಸಾವು
ಗಾಣದಾಳ ಗ್ರಾಮದ ಯುವತಿ ಸಂಧ್ಯಾ ಹಾಗೂ ಭೀಮೇಶ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ ಮನೆಬಿಟ್ಟು ಹೋಗಿ ಮದುವೆಯಾಗಿದ್ದರು. ಜೋಡಿಯನ್ನು ಪತ್ತೆಹಚ್ಚಿದ್ದ ಪೊಲೀಸರು, ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದರು. ಇಡಪನೂರು ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆ ಕುರಿತು ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಗಂಗಪ್ಪ 3 ಲಕ್ಷ ರೂಪಾಯಿ ಲಂಚ ಪಡೆದು ನನ್ನನ್ನು ಬಿಟ್ಟಿದ್ದಾರೆ. ಯುವತಿ ಒಂದು ತಿಂಗಳು ಗರ್ಭಿಣಿಯಾಗಿದ್ದರೂ ಅನ್ಯ ಜಾತಿ ಕಾರಣಕ್ಕೆ ಬೇರೆ ಮಾಡಿದ್ದಾರೆ ಎಂದು ಯುವಕ ಡೆತ್ ನೋಟ್ ಹಾಗೂ ವಿಡಿಯೋದಲ್ಲಿ ಆರೋಪಿಸಿದ್ದಾನೆ.
ಯುವಕನ ಶವ ಇನ್ನೂ ಸ್ಥಳದಲ್ಲೇ ಇದ್ದು ಮೃತನ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.