DistrictsKarnatakaLatestMain PostRaichur

ರಾಯಚೂರಿನಲ್ಲಿ ಲವ್ ಜಿಹಾದ್…!?

-ಸುಳ್ಳು ದಾಖಲೆ ಸೃಷ್ಠಿಸಿ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾದ ಯುವಕ

-ಬೀದರ್ ಯುವತಿಯ ನಕಲಿ ದಾಖಲೆಗಳು ಲಿಂಗಸುಗೂರಿನಲ್ಲಿ ಸೃಷ್ಠಿ

ರಾಯಚೂರು: ರಾಯಚೂರಿನಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಅಪ್ರಾಪ್ತ ಹಿಂದೂ ಹುಡುಗಿಯನ್ನ ಮುಸ್ಲಿಂ ಹುಡುಗ ಮದುವೆಯಾಗಲು ಮುಂದಾಗಿರುವುದು ಬಯಲಾಗಿದೆ. ಸಂಬಂಧವೇ ಇಲ್ಲದ ಗ್ರಾಮದ ಸುಳ್ಳು ದಾಖಲೆಗಳನ್ನ ಸೃಷ್ಠಿಸಿರುವ ಈ ದೊಡ್ಡ ಜಾಲದ ಬಗ್ಗೆ ಅನುಮಾನ ಮೂಡಿಸಿದೆ. ಸದ್ಯ ಹುಡುಗನ ವಿರುದ್ದ ಹುಡುಗಿ ಪೋಷಕರು ಬೀದರ್‍ನಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಮದುವೆ ನೋಂದಣಿ ಕಚೇರಿಯಲ್ಲಿ ಮಾರ್ಚ್ 6, 2017 ರಂದು ವಿವಾಹಕ್ಕೆ ಅರ್ಜಿಹಾಕಿ ನಾಪತ್ತೆಯಾಗಿರುವ ಯುವಕ-ಯುವತಿ ಮೂಲತಃ ಬೀದರ್ ನವರು. ಆದ್ರೆ ಆಧಾರ್ ಕಾರ್ಡ್ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಪ್ರಕಾರ ಅಪ್ರಾಪ್ತೆಯಾಗಿರುವ ಯುವತಿಯ ನಕಲಿ ದಾಖಲೆಗಳನ್ನ ಲಿಂಗಸುಗೂರು ತಾಲೂಕು ಆಸ್ಪತ್ರೆ ಹಾಗೂ ಇಲ್ಲಿನ ಮೆದಕಿನಾಳ ಗ್ರಾಮ ಪಂಚಾಯ್ತಿಯಲ್ಲಿ ಸೃಷ್ಠಿಸಲಾಗಿದೆ. ಅಲ್ಲದೆ ಮೆದಕಿನಾಳ ಗ್ರಾಮದ ಮತದಾರರ ಪಟ್ಟಿಗೆ ಸೇರಿಸುವಂತೆಯೂ ಅರ್ಜಿ ಸಲ್ಲಿಸಿದ್ದಾರೆ.

ಯುವತಿ ನಾಪತ್ತೆಯಾದ ದಿನವೇ ಸೃಷ್ಠಿಯಾದ ಈ ಸುಳ್ಳು ದಾಖಲೆಗಳಿಂದ ಯುವತಿಗೆ 19 ವರ್ಷಗಳಾಗಿವೆ ಅಂತ ಮದುವೆಗೆ ಅರ್ಜಿ ಸಲ್ಲಿಸಲಾಗಿದೆ. ಬೀದರ್‍ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶೇಖ್ ಜಮೀಲ್ ಅಪ್ರಾಪ್ತೆಯನ್ನ ಮದುವೆಯಾಗಲು ಮುಂದಾಗಿದ್ದಾನೆ. ಸುಳ್ಳು ದಾಖಲೆ ಸೃಷ್ಠಿಸಿ ಬಡ ಯುವತಿಯ ಮನ ಪರಿವರ್ತಿಸಿ ಲವ್ ಜಿಹಾದ್ ನಡೆದಿದೆ ಅಂತ ಗ್ರಾಮಸ್ಥರು, ಯುವತಿ ಪೋಷಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

ನಮಗೆ ಅರಿವಿಲ್ಲದೆ ಸುಳ್ಳು ದಾಖಲೆಯನ್ನ ಪಡೆದಿದ್ದಾರೆ ಅಂತ ಮೆದಕಿನಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಿಲ್ ಕಲೆಕ್ಟರ್ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಚ್ 2 ರಂದು ನಕಲಿ ವಾಸಸ್ಥಳ ಪ್ರಮಾಣ ಪತ್ರ ಪಡೆದಿದ್ದು ಮೆದಕಿನಾಳ ಗ್ರಾ.ಪಂ.ನ ಸಿಸಿಟಿವಿ ಕ್ಯಾಮೆರಾದ ಅಂದಿನ ದೃಶ್ಯಾವಳಿಗಳನ್ನ ಅಳಿಸಿ ಹಾಕಲಾಗಿದೆ. ಇದೊಂದು ವ್ಯವಸ್ಥಿತ ಜಾಲದ ಕೆಲಸವೇನೋ ಅನ್ನೋ ಅನುಮಾನ ಮೂಡಿವೆ. ಬೀದರ್‍ನ ಮಹಿಳಾ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತೆಯನ್ನ ಪೀಡಿಸುತ್ತಿದ್ದ ಶೇಖ್ ಜಮೀಲ್ ಮಾರ್ಚ್ 2 ರಂದು ಅವಳನ್ನ ಅಪಹರಿಸಿದ್ದಾನೆ ಅಂತ ಯುವತಿಯ ಪೋಷಕರು ಬೀದರ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಟ್ಟಿನಲ್ಲಿ, ಇಷ್ಟವಿಲ್ಲದಿದ್ದರೂ ಬಡ ಯುವತಿಯ ಮನವೊಲಿಸಿ ಅಥವಾ ಒತ್ತಾಯಪೂರ್ವಕವಾಗಿ ಶೇಖ್ ಜಮೀಲ್ ಲವ್ ಜಿಹಾದ್‍ಗೆ ಮುಂದಾಗಿದ್ದಾನೆ ಅಂತ ಆರೋಪ ಕೇಳಿಬಂದಿವೆ. ಸುಳ್ಳುದಾಖಲೆಗಳ ಸೃಷ್ಠಿ ಹಾಗೂ ಒಟ್ಟಾರೆ ಪ್ರಕರಣವನ್ನ ನೋಡಿದಾಗ ನಿಜಕ್ಕೂ ಲವ್ ಜಿಹಾದ್ ಜಾಲ ರಾಯಚೂರು ಹಾಗೂ ಬೀದರ್‍ನಲ್ಲಿ ಕೆಲಸ ಮಾಡುತ್ತಿದೆಯಾ ಅನ್ನೋ ಅನುಮಾನಗಳು ದಟ್ಟವಾಗಿ ಮೂಡಿವೆ.

 

Leave a Reply

Your email address will not be published. Required fields are marked *

Back to top button