ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಮನನೊಂದ ಯುವತಿಯೊರ್ವಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಪೂಜಿನಗರದಲ್ಲಿ ನಡೆದಿದೆ.
ದೀಪಾ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಪ್ಪ ಅಮ್ಮ ಇಲ್ಲದ ದೀಪಾ ಕಳೆದ ಐದಾರು ವರ್ಷಗಳಿಂದಲೂ ಬಾಪೂಜಿನಗರದಲ್ಲಿರೋ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದಳು. ಹಾಗೆಯೇ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಆದ್ರೆ ಬಾಪೂಜಿನಗರದ ದೊಡ್ಡಮ್ಮನ ಮನೆಯ ಪಕ್ಕದಲ್ಲೇ ಇದ್ದ ಸುರೇಶ್ ಎಂಬಾತನೊಂದಿಗೆ ದೀಪಾಳಿಗೆ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳಿಂದ ಮನೆಯವರಿಗೂ ಗೊತ್ತಿಲ್ಲದೆ ದೀಪಾ ಹಾಗೂ ಸುರೇಶ್ ಪ್ರೀತಿಸುತ್ತಿದ್ದರು. ಆದರೆ ಕಳೆದ 4 ದಿನಗಳ ಹಿಂದೆ ಸುರೇಶ್ ಮತ್ತೊಂದು ಯುವತಿಯನ್ನು ಕರೆದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾನೆ.
ಇದರಿಂದ ಸಾಕಷ್ಟು ಮನನೊಂದಿದ್ದ ದೀಪಾ ಬುಧವಾರ ತಡರಾತ್ರಿ ಸುರೇಶ್‍ಗೆ ಕರೆ ಮಾಡಿ ಸಾಕಷ್ಟು ವಾಗ್ವಾದ ನಡೆಸಿದ್ದಾಳೆ. ಆದ್ರೆ ಅತ್ತ ಸುರೇಶ್ ನಾನು ನಿನ್ನನ್ನ ಪ್ರೀತಿಸಿಲ್ಲ, ಮದುವೆಯೂ ಆಗಲ್ಲ. ನಾನು ಬೇರೆ ಹುಡುಗಿಯನ್ನ ಮದುವೆಯಾಗಿದ್ದೀನಿ ಅಂತ ಹೇಳಿದ್ದಾನೆ. ಈ ವಿಚಾರ ಕೇಳಿ ಇಡೀ ರಾತ್ರಿ ಸಾಕಷ್ಟು ನೊಂದಿದ್ದ ದೀಪ ಮನೆಯ ಮೇಲಿನ ಕೋಣೆಯೊಂದರಲ್ಲಿ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಳಗ್ಗೆ ಯುವತಿ ನಿದ್ದೆಯಿಂದ ಎದ್ದಿಲ್ಲ ಅಂತ ಪರಿಭಾವಿಸಿದ್ದ ಮನೆಯವರು 10 ಗಂಟೆ ನಂತರ ಕೋಣೆಯ ಬಾಗಿಲು ಬಡಿದಾಗ ಪ್ರತ್ಯುತ್ತರ ಸಿಗಲಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮೃತ ದೀಪಾಳ ಕೆಲ ನೋಟ್‍ಬುಕ್‍ಗಳಲ್ಲಿ ಪ್ರೀತಿ ಪ್ರೇಮದ ಸಂದೇಶಗಳಿದ್ದು, ಮತ್ತೊಂದು ಡೈರಿಯಲ್ಲಿ ಡೆತ್‍ನೋಟ್ ಬರೆದಿದ್ದಾಳೆ. ಸದ್ಯ ಅವುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪಿಎಸ್‍ಐ ವರುಣ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಘಟನೆ ಕುರಿತು ಪ್ರಕರಣ ಕೂಡ ದಾಖಲಿಸಲಾಗಿದ್ದು, ಆರೋಪಿ ಸುರೇಶ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv