ಹಾಸನ: ಮದುವೆಯಾಗವಂತೆ ಕಿರುಕುಳ ನೀಡುತ್ತಿದ್ದ ಕೆಎಸ್‍ಆರ್‍ಟಿಸಿ ಚಾಲಕನ ವರ್ತನೆಗೆ ಬೇಸತ್ತು ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬಳು ಕಳೆನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪ್ರಥಮ ವರ್ಷದ ಎಲ್‍ಎಲ್‍ಬಿ ಪದವಿ ಓದುತ್ತಿದ್ದ ಸಕಲೇಶಪುರ ತಾಲೂಕಿನ ಆದರಗೆರೆ ಗ್ರಾಮದ ಸುದೇಶ್-ಸುಮಿತ್ರಾ ಪುತ್ರಿ ತನುಶ್ರೀ(18) ಸಾವಿಗೆ ಶರಣಾದ ಯುವತಿ.
ಏನಿದು ಲವ್ ಸ್ಟೋರಿ:
ಸಕಲೇಶಪುರದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ತನುಶ್ರೀ ನಿತ್ಯವೂ ಸಾರಿಗೆ ಬಸ್ ನಲ್ಲಿ ಸಂಚರಿಸುತ್ತಿದ್ದಳು. ಅದೇ ಮಾರ್ಗದಲ್ಲಿ ಬಸ್ ಚಾಲಕನಾಗಿದ್ದ ಸಂತೋಷ್ ಕಳೆದೆರಡು ವರ್ಷಗಳಿಂದಲೂ ತನುಶ್ರೀಯನ್ನು ಪ್ರೀತಿಸುತ್ತಿದ್ದ. ನಂತರ ನನ್ನನ್ನು ಮದುವೆಯಾಗು ಎಂದು ಆತ ಆಕೆಯ ಬೆನ್ನು ಬಿದ್ದಿದ್ದ.
ತನುಶ್ರೀ ಎಲ್ಲೇ ಸಿಕ್ಕರೂ, ಈಕೆ ನನ್ನ ಲವರ್, ಈಕೆಯನ್ನೇ ನಾನು ಮದುವೆಯಾಗೋದು ಎಂದು ಸ್ನೇಹಿತರು ಹಾಗೂ ತನ್ನ ಸಹೋದ್ಯೋಗಿಗಳಿಗೆ ಹೇಳುತ್ತಿದ್ದ. ಆದರೆ ಸಂತೋಷ್ ನೊಂದಿಗೆ ಮದುವೆ ಮಾಡಲು ತನುಶ್ರೀ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ.
ಮೆಸೇಜ್ ನಲ್ಲಿ ಏನಿತ್ತು?
ಆ.3 ರಂದು ತನುಶ್ರೀಗೆ ಮೆಸೇಜ್ ಮಾಡಿದ ಸಂತೋಷ್,”ನಾನು ಮದ್ಯದೊಂದಿಗೆ ವಿಷ ಬೆರೆಸಿಕೊಂಡು ಸಾಯುತ್ತಿದ್ದೇನೆ. ನಮ್ಮ ಲವ್ ವಿಷಯದಲ್ಲಿ ನಿಮ್ಮ ತಂದೆಯೇ ಗೆದ್ದರು. ನಾನು ನಿನ್ನನ್ನು ಹಾಗೂ ಮನೆಯವರನ್ನು ರಾಣಿ ರೀತಿ ನೋಡಿಕೊಳ್ಳಬೇಕು ಎಂದು ಕನಸು ಕಂಡಿದ್ದೆ. ಆದರೆ ಅದು ಆಗಲಿಲ್ಲ. ನಾನೀಗ ಸಾಯುತ್ತೇನೆ. ಮುಂದಿನ ಜನ್ಮ ಇದ್ದರೆ ಸಿಗೋಣ” ಎಂದೆಲ್ಲಾ ಟೈಪ್ ಮಾಡಿ ಕಳುಹಿಸಿದ್ದಾನೆ.
ಮೆಸೇಜ್ ನೋಡಿ ಭಯಗೊಂಡ ತನುಶ್ರೀ ಸಹ ಆ.3 ರ ಸಂಜೆ ಮನೆಯಲ್ಲಿದ್ದ ಕಳೆನಾಶಕ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತನುಶ್ರೀ ಚಿಕಿತ್ಸೆ ಫಲಕಾರಿಯಾಗದೇ ಆ.17 ರಂದು ಮೃತಪಟ್ಟಿದ್ದಾಳೆ.
ಸದ್ಯ ಸಂತೋಷ್ ಸಹ ಮಂಗಳೂರಿನ ಫಾದರ್ ಮುಲ್ಲಾರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಯುವ ಮುನ್ನ ಹೇಳಿಕೆ ನೀಡಿರುವ ತನುಶ್ರೀ ನಾನು ವಿಷ ಸೇವಿಸಲು ಸಂತೋಷನೇ ಕಾರಣ ಎಂದು ಆರೋಪಿಸಿದ್ದಾಳೆ. ಪೋಷಕರು ಸಹ ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ತನುಶ್ರೀ ಸಹ ಸಂತೋಷ್ ನನ್ನು ಪ್ರೀತಿಸುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.