ಬೆಳಗಾವಿ: ಪ್ರೀತಿಸಿದ ತಪ್ಪಿಗೆ ಯುವತಿ ಮನೆಯವರು ಯುವಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯುವಕ ಮಡಿವಾಳ ರಾಯಬಾಗಕರ ಮೇಲೆ ಹಲ್ಲೆ ಮಾಡಲಾಗಿದೆ. ಯುವಕ ಧಾರವಾಡ ತಾಲೂಕಿನ ಗರಗ ಗ್ರಾಮದವನಾಗಿದ್ದು, ಎರಡು ವರ್ಷದ ಹಿಂದೆ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಕೆಲವು ತಿಂಗಳ ಹಿಂದೆ ಯುವಕ ಪ್ರೀತಿ ಮಾಡುತ್ತಿದ್ದ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿದೆ. ನಂತರ ಯುವಕನಿಗೆ ಧಮ್ಕಿ ಹಾಕಿ ಊರನ್ನೇ ಬಿಡಿಸಿದ್ದಾರೆ.
ಊರು ತೊರೆದ ಬಳಿಕ ಯುವಕ ಬೆಳಗಾವಿಯ ಮಾರುತಿ ಗಲ್ಲಿಯಲ್ಲಿ ವಾಸವಾಗಿದ್ದ. ಊರು ತೊರೆದಿದ್ದರೂ ಯುವಕ ಯುವತಿಯೊಂದಿಗೆ ಸಂಪರ್ಕದಲ್ಲಿದ್ದ. ಇದನ್ನು ತಿಳಿದು ಯುವತಿ ಮನೆಯರು ಬೆಳಗಾವಿಗೆ ಬಂದ ಮಡಿವಾಳನನ್ನು ಕಿಡ್ನಾಪ್ ಮಾಡಿದ್ದಾರೆ. ಯುವತಿಯ ಚಿಕ್ಕಪ್ಪ ಉಳಪ್ಪ, ಸಿದ್ದಪ್ಪ, ಮಡಿವಾಳ ಕಾಳೆ ಉಪಾಶಿ ನಾಧಾಪ್ ಮೂವರು ಒಂದು ವಾರದ ಹಿಂದೆ ಕಿಡ್ನಾಪ್ ಮಾಡಿ ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಶಾಕ್ ಟ್ರೀಟ್ ಮೆಂಟ್ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಚಿತ್ರಹಿಂಸೆ ನೀಡಿದ ಬಳಿ ಯುವಕನನ್ನು ವಾಪಸ್ ಬಿಟ್ಟು ಹೋಗಿದ್ದಾರೆ. ನಂತರ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಯುವಕನ ಎರಡು ಕಿಡ್ನಿ ಹಾಳಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಸದ್ಯಕ್ಕೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಸ್ಪತ್ರೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದ್ದು, ಬಳಿಕ ಪೊಲೀಸ್ ಆಯುಕ್ತರ ಸಹಾಯದಿಂದ ಯುವಕನ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಾಸಕ ಅಮೃತ ದೇಸಾಯಿ ಅವರಿಗೆ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಕೂಡ ಸಾಥ್ ನೀಡಿದ್ದರು.
ಹಲ್ಲೆ ಮಾಡಿದವರು ಮಾಜಿ ಶಾಸಕ ವಿನಯ ಕುಲಕರ್ಣಿ ಬೆಂಬಲಿಗರೆಂದು ಯುವಕನ ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.