ಡಾ.ಕೆ.ರಾಜು ನಿರ್ಮಾಣದ ಲೌಡ್ ಸ್ಪೀಕರ್ ಚಿತ್ರ ಇದೇ ತಿಂಗಳ 10ನೇ ತಾರೀಕಿನಂದು ಬಿಡುಗಡೆಯಾಗಲಿದೆ. ಈ ಹಂತದಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ.
ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಲೌಡ್ ಸ್ಪೀಕರ್ ಹೊರರಾಜ್ಯಗಳಲ್ಲಿಯೂ ಬಿಡುಗಡೆಯಾಗಲಿದೆ. ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗುವುದು ಗ್ಯಾರೆಂಟಿ.
ಇದು ಹೊಸ ಬಗೆಯ ಕಥಾ ಹಂದರ ಹೊಂದಿರುವ ಚಿತ್ರ. ಈವತ್ತಿಗೆ ಮೊಬೈಲ್ ಅಂದರೆ ಸರ್ವಂತರ್ಯಾಮಿ. ತೀರಾ ಹಳ್ಳಿಗಾಡುಗಳಲ್ಲಿಯೂ ಜನ ಮೊಬೈಲು ಬಿಟ್ಟು ಬದುಕಲಾರದಂಥಾ ವಾತಾವರಣ. ಆದರೆ, ಒಂದೇ ಒಂದು ದಿನದ ಮಟ್ಟಿಗೆ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡುವ ಛಾಲೆಂಜನ್ನೇನಾದರೂ ಹಾಕಿದರೆ ಬಹುತೇಕರು ಎಸ್ಕೇಪಾಗುತ್ತಾರೆ. ಅದಕ್ಕೆ ಕಾರಣ ಪ್ರತೀ ಮನುಷ್ಯನೂ ಬಚ್ಚಿಟ್ಟುಕೊಂಡಿರೋ ರಹಸ್ಯಗಳು!
ಅಂಥಾದ್ದರಲ್ಲೂ ಒಂದು ದಿನ ಪೂರ್ತಿ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡಬೇಕಾಗಿ ಬಂದಾಗ ಅದೇನೇನು ಅವಘಡಗಳು ಸಂಭವಿಸುತ್ತವೆ ಎಂಬುದರ ಸುತ್ತ ಈ ಕಥೆ ಹೆಣೆಯಲ್ಪಟ್ಟಿದೆ. ಈ ಹಿಂದೆ ಧೈರ್ಯಂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ.ಆರ್.ರಾಜು ಅವರು ಹೊಸತನದ ಕಾರಣದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಅಜೇಯ್ ರಾವ್ ಅವರಿಗೆ ಮಾಸ್ ಲುಕ್ಕು ಕೊಟ್ಟಿದ್ದ ಶಿವತೇಜಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇದೀಗ ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ಆಗುವ ಭರವಸೆಯನ್ನೂ ಕೂಡಾ ಚಿತ್ರ ತಂಡ ಇಟ್ಟುಕೊಂಡಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಲೌಡ್ ಸ್ಪೀಕರ್ ಆನ್ ಆಗಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ.