ಹಾವೇರಿ: ಶಿಗ್ಗಾಂವಿ ಉಪಚುನಾವಣೆ (Shiggaon By Election) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇಂದು (ಸೋಮವಾರ) ಬಿಜೆಪಿ (BJP) ಅಭ್ಯರ್ಥಿ ಭರತ್ ಬೊಮ್ಮಾಯಿ (Bharath Bommai) ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಖುರ್ಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಪ್ರಚಾರ ನಡೆಸಿದರು.
ನಂತರ ಮಾತನಾಡಿದ ಅವರು ದಿನ ನಿತ್ಯ 10 ರಿಂದ 11 ಹಳ್ಳಿಗಳಿಗೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಓಡಾಡುತ್ತಿದ್ದೇನೆ. ನಮ್ಮ ಎಲ್ಲಾ ಕಾರ್ಯಕರ್ತರು, ಹಿರಿಯರು, ಮತದಾರರ ಮನೆಗಳಿಗೆ ಭೇಟಿ ನೀಡುತ್ತಿದ್ದೇನೆ. ಸಮಯ ಬಹಳ ಕಡಿಮೆ ಇದೆ. ನನ್ನ ಪರ ನಮ್ಮ ತಂದೆ ತಾಯಿ ಕೂಡಾ ಪ್ರಚಾರ ಮಾಡುತ್ತಿದ್ದಾರೆ. ಇಡೀ ಫ್ಯಾಮಿಲಿ ಪ್ರಚಾರ ಮಾಡುತ್ತಿದ್ದಾರೆ. ಶಾಶ್ವತ ಗ್ಯಾರಂಟಿ ಅಂದರೆ ಈ ಭಾಗಕ್ಕೆ ನೀರು ಕೊಟ್ಟಿದ್ದೇವೆ. 5 ಲಕ್ಷ ರೂ. ಮೌಲ್ಯದ 15,000 ಮನೆಗಳನ್ನು ಜನರಿಗೆ ನೀಡಿದ್ದೇವೆ. 5,000 ಉದ್ಯೋಗಾವಕಾಶ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ. ನೀರು, ಮನೆ, ಉದ್ಯೋಗ ಇವು ನಮ್ಮ ಶಾಶ್ವತ ಗ್ಯಾರಂಟಿ. ಈ ಗ್ಯಾರಂಟಿಗಳನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್ ಶಾಸಕರು ದೂರ ದೂರ
ಕಾರಡಗಿ ಸೇರಿದಂತೆ ಹಲವು ಕಡೆ ನಾನು ಮತಯಾಚನೆಗೆ ತೆರಳಿದ್ದೆ. ತಂದೆಯವರು ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಪ್ರಧಾನಿ ಮೋದಿಯವರ (Narendra Modi) ಜಲಜೀವನ ಮಿಷನ್ ಮೂಲಕ ಮನೆ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಒಂದು ಕೊಡ ನೀರಿಗೆ ತಾಯಂದಿರು 4-5 ಕಿ.ಮೀ ನಡೆಯುತ್ತಿದ್ದರು. ಆದರೆ ಈಗ ನಲ್ಲಿ ತಿರುಗಿಸಿದರೆ ನೀರು ಬರುತ್ತದೆ. ಕ್ಷೇತ್ರದಲ್ಲಿ ಎಕ್ಸ್‌ಪೋರ್ಟ್, ಶಾಹಿ ಕಂಪನಿಗಳು ಗಾರ್ಮೆಂಟ್ಸ್ ಪ್ರಾರಂಭ ಮಾಡಿವೆ. ಟೆಕ್ಸ್‌ಟೈಲ್ ಪಾರ್ಕ್ ಕೂಡಾ ಶುರುವಾಗಲಿದೆ. ನಾವು ಶಾಶ್ವತ ಪರಿಹಾರ ಕೊಟ್ಟಿದ್ದೇವೆ. ಇದೆಲ್ಲಾ ಹೆಣ್ಣು ಮಕ್ಕಳಿಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪರಿಣಾಮ ಏನೂ ಆಗುವುದಿಲ್ಲ ಎಂದರು. ಇದನ್ನೂ ಓದಿ: ಇದು ವಿಜಯೇಂದ್ರನ ಟೀಂ – ಬಿಜೆಪಿ ವಕ್ಫ್ ತಂಡಕ್ಕೆ ಯತ್ನಾಳ್ ಬಹಿಷ್ಕಾರ
ನನ್ನ ನಾಮಿನೇಷನ್‌ಗೆ ಯಡಿಯೂರಪ್ಪ (B S Yediyurappa), ಪ್ರಹ್ಲಾದ್ ಜೋಶಿಯವರು (Pralhad Joshi), ಅರವಿಂದ್ ಬೆಲ್ಲದ್, ನಿರಾಣಿಯವರು ಛಲವಾದಿ ನಾರಾಯಣಸ್ವಾಮಿ ಬಂದಿದ್ದರು. ಎಲ್ಲಾ ನಾಯಕರ ಆಶೀರ್ವಾದ ನನ್ನ ಮೇಲಿದೆ. ಸರ್ಕಾರ ಇದ್ದಾಗ ಚುನಾವಣೆ ಮಾಡಲು ಸಚಿವರೆಲ್ಲಾ ಬಂದೇ ಬರುತ್ತಾರೆ. ನ.23 ರಂದು ಡಬ್ಬಿ ತೆರೆದು ನೋಡಿದಾಗ ಅವರಿಗೆ ಗೊತ್ತಾಗುತ್ತದೆ. ಜನ ಆಶೀರ್ವಾದ ಮಾಡುತ್ತಾರೆ. ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಳಿದ್ದು 18 ಕ್ಷೇತ್ರ, ಸಿಕ್ಕಿದ್ದು 10 – ಮುಂಬೈ ಕಾಂಗ್ರೆಸ್‌ನಲ್ಲಿ ಬಿರುಕು