ಮಡಿಕೇರಿ: ಅಕ್ರಮವಾಗಿ ಮಾರಾಟ ಮಾಡಲು ಲಾಟರಿಯನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.
ಸೈನಾಫ್ (34) ಬಂಧಿತ ವ್ಯಕ್ತಿ. ಈತನನ್ನು ವಿಶೇಷ ಅಪರಾಧ ಪತ್ತೆದಳದ ಸಿಬ್ಬಂದಿ ಮಾಲು ಸಮೇತ ಬಂಧಿಸಿದ್ದಾರೆ. ಈತ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಮೆಟ್ನಹಳ್ಳ ನಿವಾಸಿ ಮೊಹಮ್ಮದ್ ಎಂಬವರ ಮಗ ಎಂದು ತಿಳಿದುಬಂದಿದೆ.
ಬಂಧಿತ ಸೈನಾಫ್ ಕೇರಳದ ಇರಿಟಿಯಿಂದ ಕಾರಿನಲ್ಲಿ ರೂ.76,000 ಮೌಲ್ಯದ 2,300 ಲಾಟರಿ ಟಿಕೆಟ್ ಗಳನ್ನು ಮಾರಾಟ ಮಾಡಲು ಏಳನೇ ಹೊಸಕೋಟೆಯತ್ತ ತರುತ್ತಿದ್ದನು. ಈ ಸಂದರ್ಭ ಜಿಲ್ಲಾ ಎಸ್‍ಪಿ ಸುಮನ್ ಡಿ ಪೆನ್ನಕರ್, ಸೋಮವಾರಪೇಟೆ ಡಿವೈಎಸ್‍ಪಿ ದಿನಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ಸಿಪಿಐ ದಿನೇಶ್ ಕುಮಾರ್, ಸುಂಟಿಕೊಪ್ಪ ಪಿಎಸ್‍ಐ ಜಯರಾಮ್ ಅವರು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಸೈನಾಫ್ ಅನ್ನು ಬಂಧಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಮತ್ತೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕೇರಳದ ರಾಜ್ಯದ ಲಾಟರಿಗಳ ಮಾರಾಟ ಹೆಚ್ಚಾಗಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.