– ಆಡಿಯೋ ವೈರಲ್
ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಡೆದ ನಾಗ ಪವಾಡ ಸಾಕಷ್ಟು ಸುದ್ದಿ ಮಾಡಿದ್ದು, ಇದೀಗ ಆ ಘಟನೆ ಭಾರೀ ಚರ್ಚೆಗೀಡಾಗಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಅರಗದ ನಾಗಪಾತ್ರಿ ನಾಗರಾಜ್ ಭಟ್ ಬರ್ಸಬೆಟ್ಟು ಮನೆಯ ಹಾಲ್‍ನ ಅಡಿಭಾಗದಲ್ಲಿ ನಾಗನ ಮೂರ್ತಿ ಇದೆ ಎಂದು ಮನೆಯವರಿಗೆ ತಿಳಿಸಿದ್ದರು. ಹಲವು ಜನರ ಸಮ್ಮುಖದಲ್ಲಿ ಅಗೆದಾಗ ಮೂರ್ತಿ ಪತ್ತೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧ ವಾದಗಳು ಹುಟ್ಟಿಕೊಂಡಿದ್ದು, ಸಂಬಂಧಪಟ್ಟಂತೆ ಆಡಿಯೋ ಕೂಡ ಹರಿದಾಡುತ್ತಿದೆ.
Advertisement
ಪೂನಾದಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಮೋಸ ಹೋಗಿದ್ದೇನೆ. ಆ ನಾಗಪಾತ್ರಿ ಇದೇ ರೀತಿ ತುಂಬಾ ಜನಕ್ಕೆ ಮೋಸ ಮಾಡಿದ್ದಾರೆ ಅನ್ನುವ ಒಂದು ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನಡುವೆ ಆಡಿಯೋದಲ್ಲಿ ನಾಗರಾಜ್ ಭಟ್ ವಿರುದ್ಧ ಮಾತನಾಡಿರುವ ವ್ಯಕ್ತಿಯೇ ಸ್ವತಃ ಅದು ನನ್ನ ಧ್ವನಿಯೇ ಅಲ್ಲ ಎಂದು ಸಂಭಾಷಣೆ ನಡೆಸಿರುವ ಇನ್ನೊಂದು ಆಡಿಯೋ ಕೂಡ ಹರಿದಾಡುತ್ತಿದೆ. ನಾಗಪಾತ್ರಿ ನಾಗರಾಜ್ ಭಟ್ ಪರವಾಗಿ ಕೂಡ ಆಡಿಯೋ ಹರಿದಾಡುತ್ತಿದೆ.
Advertisement
Advertisement
ನಾಗ ಪಾತ್ರಿಯ ವಿರುದ್ಧವಾಗಿ ಹರಿದಾಡುವ ಆಡಿಯೋ:
ಕರೆ ಮಾಡಿದವ: ನೀವು ಒಂದು ವಿಡಿಯೋ ಹಾಕಿದ್ರಿ, ಎಲ್ಲಿ ಇದು? ಎಲ್ಲಿಯಾಗಿದ್ದು, ಇದರ ಬಗ್ಗೆ ಡಿಟೈಲ್ ಸಿಗ್ತದಾ
ಸುದೀಪ್: ನೀವು ಎಲ್ಲಿಂದ ಮಾತಾಡೋದು
ಕರೆ ಮಾಡಿದವ: ನಾನು ಪೂನಾದಿಂದ ಮಾತಾಡೋದು, ಆ ಜನ ಡೊಂಗಿ, ಸುಳ್ಳು
ಸುದೀಪ್: ಪೆರ್ಡೂರಿನಲ್ಲಿ ಕೂಡ ಈ ಹಿಂದೆ ಆಗಿತ್ತು..
ಕರೆ ಮಾಡಿದವ: ನನ್ನ ಮನೆಯಲ್ಲಿಯೇ ಆಗಿದ್ದು, ಇದನ್ನು ನೋಡಿ ಶಾಕ್ ಆಯ್ತು, ಅದೇ ಮೂರ್ತಿ. ಅದೆ ಇದು, ಪೇಪರ್‍ನಲ್ಲಿರುವ ಚಿತ್ರ ಸೇಮ್ ನನ್ನ ಹತ್ತಿರ ಉಂಟು..
Advertisement
ಸುದೀಪ್: ಏನು ಹೇಳ್ತಿದ್ದೀರಿ
ಕರೆ ಮಾಡಿದವ: ನಿಮ್ಮ ಆಣೆ ಹೌದು, ಅವರಿಗೆ ಎರಡು ಹೊಡಿಬೇಕು, ಅವರು ಪೂನಾದ ನನ್ನ ಹೋಟೆಲ್ ಗೆ ಬಂದಿದ್ದರು. ಈ ಘಟನೆ ನನ್ನ ಮನೆಯಲ್ಲಿಯೇ ಆಗಿತ್ತು. ಹಾಗೆ ಮಾಡುವುದು ಸುಮ್ಮನೆ, ಸುಳ್ಳು. ಅವರು ಮೊದಲು ಇಡುವುದು, ನಂತರ ತೆಗೆಯುವುದು
ಸುದೀಪ್: ಏನ್ ಹೇಳ್ತಿದ್ದೀರಾ ಅಂತ ಮರು ಪ್ರಶ್ನೆ ಹಾಕಿದ್ದಾರೆ.
ಕರೆ ಮಾಡಿದವ: ನಿಮ್ಮಾಣೆ ಸತ್ಯ, ಬೇಕಾದರೆ ಗಂಗಾಧರ್ ಮನೆಗೆ ಹೋಗಿ ಕೇಳಿ. ಅಗೆಸಿ ಹೊಂಡ ತೋಡಿಸಿ, ನಂತರ ನೀರು ತರಲು ಕಳುಹಿಸುತ್ತಾರೆ. ಮನೆಯವರ ಹತ್ತಿರ ಒಂದೊಂದೆ ಕೊಡಪಾನ ನೀರು ತರಲು ಕಳುಹಿಸುತ್ತಾರೆ. ಅವರು ಆಚೆ ಈಚೆ ಹೋದಾಗ ಮೂರ್ತಿ ಇಡೋದು, ಭಟ್ರ ಮಗ ನಿಕಿತ್ ಇದನ್ನೆಲ್ಲಾ ಮಾಡೋದು, ಅವನಿಗೂ ಎರಡು ಬಿಡಬೇಕು. ಅವರು ತೀರ್ಥಹಳ್ಳಿಯವರು ಮೊದಲು ನನ್ನ ಮನೆಯಲ್ಲಿ ಮಾಡಿದ್ರು. ಆ ನಂತರ ತುಂಬಾ ಮನೆಯಲ್ಲಿ ಮಾಡಿದ್ರು. ನಂಗೆ ಅದೆಲ್ಲಾ ಸುಳ್ಳು ಅಂತಾ ಗೊತ್ತಾಯ್ತು. ಮನೆಯವರು ನೀರು ಹೋದಾಗ ಕಾರಿನಿಂದ ಮೂರ್ತಿ ತಂದು ಇಡುತ್ತಾರೆ, ಅದು ಅಲ್ಲಿಯೇ ಸಿಕ್ಕಿತ್ತು ಅಂತ ಮೋಸ ಮಾಡೋದು.
ಅವನು ಭಾರಿ ಡೊಂಗಿ. ನನಗೆ ಪರಿಚಯ ಮಾಡಿಕೊಟ್ಟವರಿಗೂ ಅವನ ವಿಚಾರ ತಿಳಿದು ಬೇಸರವಾಯಿತು. ಅವರು ಚಿನ್ನ ಎಲ್ಲಾ ತಗೊಂಡು ಜನಗಳಿಗೆ ಮೋಸ ಮಾಡುತ್ತಿದ್ದಾರೆ. ಆರಂಭದಲ್ಲಿ ನಮ್ಮಲ್ಲಿ ಬರುವಾಗ ಅವರ ಬಳಿ ಏನೂ ಇರಲಿಲ್ಲ. ಈಗ ಎಲ್ಲಾ ಇದೆ. ನಾಗನ ಹೆಸರಿನಲ್ಲಿ ಚಿನ್ನಕ್ಕೆ ಡಿಮಾಂಡ್ ಇಡೋದು. ನನ್ನ ಸಂಬಂಧಿಕರ ಹತ್ತಿರ ಕೂಡ ಉಂಗುರ ತೆಗೆದುಕೊಂಡಿದ್ದಾರೆ. ಜನರ ಹತ್ತಿರ ನಾಗ ದರ್ಶನ ಮಾಡಿ, ನಾಗನನ್ನು ನಂಬಲು ಹೇಳಿ ಕಲೆಕ್ಷನ್ ಮಾಡ್ತಾರೆ. ಇದೆ ರೀತಿ ಮಾಡಿದ್ರೆ ಅವರಿಗೆ ಜನರು ಹೊಡಿತಾರೆ ಅಂತ ಹೇಳಿದ್ದಾರೆ.
ನಾಗಪಾತ್ರಿ ಪರವಾಗಿ ಹರಿದಾಡುವ ಆಡಿಯೋ ಇಂತಿದೆ;
ಕರೆ ಮಾಡಿದವ: ರಘು ಶೆಟ್ರ ಅಲ್ವಾ
ರಘು ಶೆಟ್ಟಿ: ಹೌದು
ಕರೆ ಮಾಡಿದವ: ನಾನು ಮುದ್ರಾಡಿಯಿಂದ ಮಾತಾಡ್ತಾ ಇದ್ದೇನೆ. ನಿನ್ನೆ ನಾಗನ ಕಲ್ಲು ಸಿಕ್ಕಿದ ವಿಷಯ ಸುಳ್ಳು ಅನ್ನೊ ಆಡಿಯೋ ಹರಿದಾಡ್ತಾ ಇದೆ ಅಂತ ವಿಷಯ ಬಂದಿದೆ
ರಘು ಶೆಟ್ಟಿ: ನನ್ನ ಹೆಸರು ಬಳಸಿದ್ದು ಯಾರು?
ಕರೆ ಮಾಡಿದವ: ಆ ವಿಡಿಯೋ ಬೇಕಾದರೆ ನಾನು ಫಾರ್ವರ್ಡ್ ಮಾಡ್ತಾನೆ
ರಘು ಶೆಟ್ಟಿ: ಅದು ನನಗೆ ಬಂದಿದೆ, ಆ ಸ್ವರ ನನ್ನದಲ್ಲ, ನಾನು ಭಟ್ರ ಹತ್ತಿರ ಅದನ್ನೆ ಹೇಳಿದ್ದೆ, ನನ್ನ ಸ್ವರ ಪರಿಚಯ ಇಲ್ವಾ ಅಂತಾ. ಭಟ್ರು ಕೂಡ ಅದೇ ಹೇಳಿದ್ರು ನಿನ್ನ ಸ್ವರ ಅಲ್ಲಾ ಅಂತಾ. ಭಟ್ರ ಹತ್ತಿರ ಹೇಳಿದ್ದೆ, ನನ್ನ ಸ್ವರ ರೆಕಾರ್ಡ್ ಮಾಡಿ ನೋಡಿ ಆ ಸ್ವರಕ್ಕೆ ಮ್ಯಾಚ್ ಆಗ್ತಾದ ಅಂತ
ಕರೆ ಮಾಡಿದವ: ನಿನ್ನೆ ಅಷ್ಟು ಖರ್ಚು ಮಾಡಿ ನಾಗಕಲ್ಲು ತೆಗ್ದಿದ್ದಾರೆ, ನಿಮ್ಮ ಹೆಸರನ್ನು ಸೇರಿಸಿ ಆಡಿಯೋ ಬಿಟ್ಟಿದ್ದಾರೆ
ರಘು ಶೆಟ್ಟಿ: ನನ್ನನ್ನು ಕರೆಯಿರಿ, ಅದು ನಾನಲ್ಲ ನಾನು ಬೇಕಾದರೆ ಕರೆದಲ್ಲಿ ಬರುತ್ತೇನೆ. ಭಟ್ರು ಮತ್ತು ನನಗೆ ಒಳ್ಳೆ ಸಂಬಂಧವಿದೆ. ನಾನು ಆ ವಿಚಾರ ಯಾರ ಬಳಿ ಮಾತಾಡಿಲ್ಲಾ. ಆಡಿಯೋದಲ್ಲಿ ಇರುವ ಸ್ವರ ಯಾರದ್ದು ಅಂತ ಗೊತ್ತಾದರೆ ಭಟ್ರ ಮಗನ ಹತ್ತಿರ ನನಗೆ ತಿಳಿಸಿ ಎಂದಿದ್ದೇನೆ.
ಕರೆ ಮಾಡಿದವ: ನಿಮ್ಮ ಜೊತೆ ನಡೆಸಿದ ಮಾತುಕತೆಯನ್ನು ವಾಟ್ಸ್ಯಾಪ್ ಮಾಡಬಹುದಾ?
ರಘು ಶೆಟ್ಟಿ: ತೊಂದರೆ ಇಲ್ಲ ಹಾಕಿ ಅದರಿಂದ ನನಗೆ ತೊಂದರೆ ಇಲ್ಲಾ. ಈ ಹಿಂದೆ ಆಡಿಯೋದಲ್ಲಿ ನನ್ನ ಹೆಸರು ಉಲ್ಲೇಖ ಇಲ್ಲ. ನಾವು ದೇವರ ಮೇಲೆ ನಂಬಿಕೆ ಇರಿಸಿಕೊಂಡಿರುವವರು ನಾವು ಹಾಗೆಲ್ಲಾ ಮಾಡೋಲ್ಲ.
ಒಟ್ಟಿನಲ್ಲಿ ನಾಗೋದ್ಭವ ವಿಚಾರ ಈಗ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಸ್ತಿಕರು ಪವಾಡ ಅಂತ ವಾದಿಸಿದರೆ, ನಾಸ್ತಿಕರು ಪ್ರಗತಿಪರರು ಇದನ್ನು ಗಿಮಿಕ್ ಅಂತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews