ಹಾಸನ: ಆರು ದಶಕಗಳಿಂದ ಈ ರೀತಿಯ ಪ್ರವಾಹ ನೋಡಿರಲಿಲ್ಲ, ಅಪಾಯದ ಅಂಚು ಮೀರಿ ನೀರು ಹರಿದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಜೆಡಿಎಸ್ ಹಿರಿಯ ಶಾಸಕ ಎಟಿ ರಾಮಸ್ವಾಮಿ ಹೇಳಿದ್ದಾರೆ.
ರಾಮನಾಥಪುರದಲ್ಲಿ ಮಾತನಾಡಿದ ಅವರು ಗಂಜಿ ಕೇಂದ್ರ ಹೆಸರಿನ ಬಗ್ಗೆ ನನಗೆ ವೈಯುಕ್ತಿಕವಾಗಿ ಸಮಾಧಾನವಿಲ್ಲ. ಅದು ಕರಾವಳಿ ಭಾಗದಿಂದ ಬಂದಿರುವ ಹೆಸರು. ನೆರೆ ಸಂತ್ರಸ್ತರ ಪುನರ್ವಸತಿ ಕೇಂದ್ರಗಳನ್ನು ಮಾಡಿದ್ದೇವೆ. ಇನ್ನೂ ನಮ್ಮ ಪೂರ್ವಜರು ಕಟ್ಟಿರುವ ರಾಮೇಶ್ವರ ದೇವಸ್ಥಾನವು ಜಲಾವೃತವಾಗಿತ್ತು. ಸಂತ್ರಸ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದ್ದೇವೆ. ಒಟ್ಟು 201 ಮನೆಗಳಲ್ಲಿ 669 ಜನಸಂಖ್ಯೆ ಇದ್ದು ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಮನೆಗಳಿಂದ ನೀರು ತೆರವಾಗಿದೆ. ಹಾನಿಗೊಳಗಾದ ಮನೆಗಳನ್ನು ಹೊರತುಪಡಿಸಿ ಉಳಿದ ಮನೆಗಳಿಗೆ ವಾಪಾಸ್ಸು ತೆರಳುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಯಾರಿಗೆ ಸಮಸ್ಯೆ ಇದೆಯೋ ಅವರು ಮಾತ್ರ ಪುನರ್ವಸತಿಯನ್ನು ಬಳಕೆ ಮಾಡುವಂತೆ ಶಾಸಕರು ಮನವಿ ಮಾಡಿಕೊಂಡರು.
ಕ್ಷೇತ್ರದ ವಿವಿಧೆಡೆ ರಸ್ತೆಗಳ ಹಾನಿಯಿಂದ 23 ಕೋಟಿ ರೂ. ನಷ್ಟ, ಜಿಲ್ಲಾ ಪಂಚಾಯತ್ ರಸ್ತೆಗಳು, ಕೆರೆಗಳು, ಶಾಲಾಕಟ್ಟಡ, ವಿದ್ಯಾರ್ಥಿನಿಲಯ, ಸೇರಿದಂತೆ 22.664 ಕೋಟಿ ರೂ. ನಷ್ಟವಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ 4,759 ಬೆಳೆ ನಷ್ಟ 12 ಕೋಟಿ ರೂ., ತೋಟಗಾರಿಕೆ ಬೆಳೆಯಲ್ಲಿ 7.75 ಕೋಟಿ ರೂ ನಷ್ಟವಾಗಿದೆ. ಒಂದು ಸಾವಿರ ಮನೆಗಳಿಗೆ ತಾಲೂಕಿನಾದ್ಯಂತ ಹಾನಿಯಾಗಿದ್ದು, 5 ಕೋಟಿ ರೂ. ನಷ್ಟವಾಗಿದೆ. ಒಟ್ಟಾರೆ ಅರಕಲಗೂಡು ತಾಲೂಕಿನಲ್ಲಿ 77.19 ಕೋಟಿ ನಷ್ಟ ಸಂಭವಿಸಿದೆ ಎಂದು ವಿವರಿಸಿದರು.
ಕಷ್ಟದಲ್ಲಿರುವ ಜನರಿಗೆ ಸರ್ಕಾರ ನೆರವಿಗೆ ಧಾವಿಸಬೇಕು ಮತ್ತು ಪರಿಹಾರ ಕಾಮಗಾರಿ ಮಾಡಲು ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು. ನಾನೂ ಕೂಡ ಇಲ್ಲಿಯೇ ನೊಂದವರೊಂದಿಗೆ ವಾಸ ಇದ್ದೇನೆ. ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv