ಕಾರವಾರ: ತಾತ್ಕಾಲಿಕ ಸೇತುವೆಯ ಮೇಲೆ ಸಾಗುತ್ತಿದ್ದ ಲಾರಿಯೊಂದು ನದಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪಣಸಗುಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಲಾರಿಯಲ್ಲಿದ್ದ ಐವರನ್ನು ರಕ್ಷಣೆ ಮಾಡಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ರಾಜೇಶ್ ಹರಿಕಂತ್ರ, ಸುನೀಲ್, ರಾಜು, ಶಿವಾನಂದ, ದಿನೇಶ್ ರಕ್ಷಣೆಗೊಳಗಾದವರಾಗಿದ್ದು, ಸಂದೀಪ್ ಕಾಣೆಯಾದ ವ್ಯಕ್ತಿ. ಆತನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅಂಕೋಲಾದ ಪಣಸಗುಳಿ ಗ್ರಾಮಕ್ಕೆ ಚಿರೇಕಲ್ಲನ್ನು ಲಾರಿಯಲ್ಲಿ ತುಂಬಿ ಅನ್‌ಲೋಡ್ ಮಾಡಿ ಮರಳಿ ಬರುವಾಗ ಈ ಘಟನೆ ನಡೆದಿದೆ. ಸೇತುವೆ ಮೇಲೆ ಗಂಗಾವಳಿ ನದಿ ನೀರು ಹರಿದಿದ್ದು, ಅದರಲ್ಲಿಯೇ ದಾಟಲು ಹೋಗಿ, ರಭಸದ ನೀರಿನ ಹರಿವಿನಿಂದ ಲಾರಿ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋಗಿದೆ. ಇದನ್ನೂ ಓದಿ: ಮದರಸಾಗಳಿಗಾಗಿ ವಿಶೇಷ ಮಂಡಳಿ ರಚನೆಗೆ ಪ್ಲಾನ್- ತಜ್ಞರ ವರದಿ ಕೇಳಿದ ಸಚಿವ ನಾಗೇಶ್
ಲಾರಿ ಮುಳುಗುತ್ತಿದ್ದಂತೆ ಅದರಲ್ಲಿದ್ದವರು ಹೇಗೋ ಮಾಡಿ ಲಾರಿ ಮೇಲೆ ನಿಂತು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಗುಳ್ಳಾಪುರದ ಸ್ಥಳೀಯ ಬೋಟ್ ಸಹಾಯದಿಂದ ಐವರ ರಕ್ಷಣೆ ಮಾಡಲಾಗಿದೆ. ನಾಪತ್ತೆಯಾಗಿರುವ ಸಂದೀಪ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,255 ಮಂದಿಗೆ ಕೊರೊನಾ – ಮೂವರು ಸಾವು