ಬೆಂಗಳೂರು: ಬೆಲೆ ಏರಿಕೆಯನ್ನು ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಕರೆಕೊಟ್ಟಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದೆ. ಅದರಂತೆ ಲಾರಿಗಳು ರೋಡಿಗೆ ಇಳಿಯುತ್ತಿಲ್ಲ. ಇಂದರಿಂದಾಗಿ ಇಂದು (ಏ.15) ಬೆಳಗ್ಗೆಯಿಂದ ಆಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಲಾರಿ ಮಾಲೀಕರ ಸಂಘ (State Lorry Owner’s Association) ಕರೆ ನೀಡಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಸೇವೆ ಬಂದ್ ಮಾಡಲಿವೆ. ಇದರಿಂದ ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿರಲಿಲ್ಲ.
ಮುಷ್ಕರದ (Lorry Strike) ಪರಿಣಾಮವಾಗಿ ಇಂದಿನಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಸಂಚಾರ ನಿಲ್ಲಿಸಲಿವೆ.
ಲಾರಿ ಮಾಲೀಕರ ಬೇಡಿಕೆ ಏನು?
*ಡೀಸೆಲ್ ದರ ಇಳಿಕೆ ಮಾಡಬೇಕು.
*ಟೋಲ್ ಸಂಗ್ರಹ ಕೈ ಬಿಡಬೇಕು.
*ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್ ತೆಗೆಯಬೇಕು.
*ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು.
*ಸರಕು ಸಾಗಣೆ ವಾಹನ ನಿರ್ಬಂಧ ಹಿಂಪಡೆಯಬೇಕು.
ಲಾರಿ ಮುಷ್ಕರದಿಂದ ಏನೇನು ಎಫೆಕ್ಟ್?
*ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ.
*ಏರ್‌ಪೋರ್ಟ್ ಟ್ಯಾಕ್ಸಿ ಸಿಗೋದು ಡೌಟ್.
*ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.
*ಜಲ್ಲಿ ಕಲ್ಲು, ಮರಳು ಲಾರಿ ಓಡಾಡಲ್ಲ.
*ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆಯಿಲ್ಲ.
*ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಾಧ್ಯತೆ ಅನುಮಾನ.
*ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ವ್ಯತ್ಯಯ ಸಾಧ್ಯತೆ.
ಯಾವ ಸೇವೆ ಲಭ್ಯ?
*ಹಾಲು
*ಔಷಧ
*ಗೃಹ ಬಳಕೆ ಡುಗೆ ಅನಿಲ
*ಆಂಬ್ಯುಲೆನ್ಸ್
*ಅಗ್ನಿಶಾಮಕ ಸೇವೆ ವಾಹನ