ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಏಪ್ರಿಲ್ 14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘ (Lorry Owners Association) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ರಾಜ್ಯಾದ್ಯಂತ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದ್ದು, ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ತೆರಳುವ ಸರಕು ಸಾಗಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.
ಹೌದು. ಪ್ರಸ್ತುತ ಡಿಸೇಲ್ ದರ ಹೆಚ್ಚಳ, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ, ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್, FC ಶುಲ್ಕ ಹೆಚ್ಚಿಸಿರುವುದು, ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ, ಚಾಲಕರ ಮೇಲೆ ಹಲ್ಲೆ ಹೀಗೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ – ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಆಲ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ದೆಹಲಿ, ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಏರ್ ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್, ಜಲ್ಲಿ ಕಲ್ಲು, ಮರಳು ಲಾರಿ ಅಸೋಸಿಯೇಷನ್, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ, ಸೌಥ್ ಜೋನ್ ಲಿಪಿಜಿ ಅಸೋಸಿಯೇಷನ್, ಜಲ್ಲಿ, ಮರಳು ಸಾಗಣೆ ವಾಹನಗಳು, ಗ್ಯಾಸ್ ಟ್ಯಾಂಕ್ ಮಾಲೀಕರ ಸಂಘ ಸಹಿತ 69 ಸಂಘಟನೆಗಳು ಮುಷ್ಕರ ಬೆಂಬಲಿಸಿವೆ. ರಾಜ್ಯದಲ್ಲಿ ಸುಮಾರು 700 ಗೂಡ್ಸ್ ಕಚೇರಿಗಳಿದ್ದು, ಬಂದ್ ಆಗಲಿವೆ. ಈ ಬಗ್ಗೆ ಕೈಗಾರಿಕೆ, ಕಾರ್ಖಾನೆ, ಕಂಪನಿಗಳಿಗೆ ಮುಷ್ಕರದ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.
ಡೀಸೆಲ್ ದರವನ್ನು 2024ರ ಜೂನ್‌ನಲ್ಲಿ 3 ರೂ. ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಈ ಏರಿಕೆ ಕೈಬಿಡುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಅನ್ಯಧರ್ಮೀಯ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್
ರಾಜ್ಯದಲ್ಲಿ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್ ಇಲ್ಲ. ಹಾಗಾಗಿ ರಾಜ್ಯದಲ್ಲಿ ಟೋಲ್ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ 5 ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.
ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?
ಸದ್ಯ ರಾಜ್ಯಾದ್ಯಂತ 6 ಲಕ್ಷ ಸರಕು ಲಾರಿಗಳ ಕಾರ್ಯಾಚರಣೆ ಬಂದ್ ಆಗುವುದರಿಂದ ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಏರ್ ಪೋರ್ಟ್ ಟ್ಯಾಕ್ಸಿ, ಟೂರಿಸ್ಟ್ ಟ್ಯಾಕ್ಸಿ ಸಿಗೋದು ಸಹ ಅನುಮಾನವಿದೆ. ಇದರಿಂದ ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆ, ಎಲ್‌ಪಿಜಿ ಸಿಲಿಂಡರ್ ಸರಬರಾಜು ಹಾಗೂ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ವ್ಯತ್ಯಯ ಸಾಧ್ಯತೆ ಇದೆ ಎಂದು ಸಹ ಲಾರಿ ಮಾಲೀಕರು ತಿಳಿಸಿದ್ದಾರೆ. ಇದನ್ನೂ ಓದಿ: 2,000 ಕೋಟಿ ಅಕ್ರಮ, 400 ಕೋಟಿ ಕಮಿಷನ್ ಆರೋಪ – ಡಿಕೆಶಿ, ಡಿಕೆಸು ವಿರುದ್ಧ ರಾಜ್ಯಪಾಲರಿಗೆ ಮುನಿರತ್ನ ದೂರು