ಹಾಸನ: ಸರಕು ಸಾಗಿಸುವ ಎರಡು ಕಂಟೈನರ್ ಲಾರಿಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಸಿಂಗಾಪುರ ಗ್ರಾಮದ ಬಳಿ ನಡೆದಿದೆ.
ದಿಲೀಪ್ ಗೌಡ (25) ಮತ್ತು ಚಂದ್ರಶೇಖರ್ (36) ಮೃತ ದುರ್ದೈವಿಗಳು. ಮೃತರು ಲಾರಿಯ ಚಾಲಕರು ಎಂದು ಗುರುತಿಸಲಾಗಿದೆ. ಅಪಘಾತದ ರಭಸಕ್ಕೆ ಮೃತ ದೇಹಗಳು ಕಂಟೈನರ್ ಲಾರಿ ಒಳಗೆ ಸಿಲುಕಿ, ಗುರುತು ಹಿಡಿಯಲು ಸಾಧ್ಯವಾಗಷ್ಟು ಛಿದ್ರವಾಗಿವೆ.
ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ.
ರಸ್ತೆ ಅಗಲೀಕರಣಕ್ಕೆಂದು ರಸ್ತೆಯ ಒಂದು ಬದಿ ಮಣ್ಣನ್ನು ದಟ್ಟವಾಗಿ ಸೇರಿಸಿರುವುದರಿಂದ ಕಿರಿದಾದ ರಸ್ತೆಯಲ್ಲಿ ವಾಹನಗಳ ಸಂಚಾರ ಕಷ್ಟಕರವಾಗಿದೆ. ಆದ್ದರಿಂದ ಇಂತಹ ಅಪಘಾತಗಳು ಪದೇ ಪದೇ ನಡೆದು ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.