ಮೈಸೂರು: ವೇಗವಾಗಿ ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿ ರಸ್ತೆಯ ಬದಿಯ ದೇವಸ್ಥಾನಕ್ಕೆ ಗುದ್ದಿದ ಪರಿಣಾಮ ದೇವಸ್ಥಾನ ನೆಲಸಮಗೊಂಡ ಘಟನೆ ನಗರದ ನಂಜನಗೂಡು ರಸ್ತೆಯ ರಿಂಗ್ ರಸ್ತೆ ಬಳಿ ಸಂಭವಿಸಿದೆ.
ನಗರದ ಹೊರಹೊಲಯದ ನಂಜನಗೂಡ ರಸ್ತೆಯ ರಿಂಗ್ ರಸ್ತೆ ವೃತ್ತದಲ್ಲಿ ವೇಗವಾಗಿ ಬಂದ ಲಾರಿಯೊಂದು ಅಡ್ಡಾದಿಡ್ಡಿ ಚಲಿಸಿದೆ. ಈ ವೇಳೆ ರಸ್ತೆ ಬದಿ ಇದ್ದ ಬಸವೇಶ್ವರ ದೇಗುಲಕ್ಕೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ದೇವಸ್ಥಾನ ಸಂಪೂರ್ಣ ನೆಲಸಮಗೊಂಡಿದೆ. ರಸ್ತೆ ಬದಿ ನಿಂತಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬಸವೇಶ್ವರ ಮೂರ್ತಿ ಭಗ್ನಗೊಂಡಿದೆ.
ಘಟನೆ ಸಂಬಂಧ ಸಾರ್ವಜನಿಕರು ರೊಚ್ಚಿಗೆದ್ದು ನಂಜನಗೂಡು ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ದೇವಸ್ಥಾನವನ್ನು ಮತ್ತೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.