– ತುಮಕೂರಲ್ಲಿ ಯುಜಿಡಿ ಮುಚ್ಚೋ ಸರ್ಕಸ್
– ಪೈಪ್ ತುಂಬಿಕೊಂಡು ಬರ್ತಿದ್ದ ಲಾರಿಯೇ ಕುಸಿದು ಬಿತ್ತು
– ರಸ್ತೆ ಗುಂಡಿಗಳಿಂದ ಮದುವೆಗಳು ಶಿಫ್ಟ್
ತುಮಕೂರು: ನೀವು ಬೈಕ್ ಅಥವಾ ಕಾರ್‍ನಲ್ಲೇನಾದ್ರೂ ತುಮಕೂರು ಕಡೆಗೆ ಹೋಗ್ಬೇಕಂದ್ರೆ ನಿಮ್ಮ ಅದೃಷ್ಟ ಗಟ್ಟಿಯಾಗಿದೆಯಾ ಅಂತ ಚೆಕ್ ಮಾಡ್ಕೊಂಡು ಹೋಗೋದು ಒಳ್ಳೇಯದು. ಯಾಕಂದ್ರೆ ತುಮಕೂರು ನಗರದ ರಸ್ತೆಗಳು ಭದ್ರವಾಗಿಲ್ಲ. ಯಾವಾಗ ಬೇಕಾದ್ರೂ, ಯಾವ ರಸ್ತೆಗಳು ಬೇಕಿದ್ರೂ ಕುಸಿದು ಬೀಳ್ಬಹುದು. ಪ್ರಾಣ ತೆಗೆಯೋ ತುಮಕೂರು ರಸ್ತೆ ಗುಂಡಿಗಳಿಗೆ ಮದುವೆಗಳನ್ನೇ ಶಿಫ್ಟ್ ಮಾಡೋ ಖದರ್ ಕೂಡ ಇದೆ.
ಸ್ಮಾರ್ಟ್ ಸಿಟಿ ತುಮಕೂರು ನಗರದಲ್ಲಿ ಯುಜಿಡಿ(ಅಂಡರ್‍ಗ್ರೌಂಡ್ ಡ್ರೈನೇಜ್) ಗುಂಡಿ ಮುಚ್ಚೋ ಸರ್ಕಸ್ ನಡೆಯುತ್ತಿದೆ. ಅದು ಅಂತಿಂಥಾ ಸರ್ಕಸ್ ಅಲ್ಲ. ಸಣ್ಣ ಗುಂಡಿ ಮುಚ್ಚಲು ತುಮಕೂರು ಪಾಲಿಕೆ ಅಧಿಕಾರಿಗಳು ನಡೆಸೋ ವಾರಗಟ್ಟಲೆಯ ಭರ್ಜರಿ ಸರ್ಕಸ್. ಹೌದು, ತುಮಕೂರು ನಗರದ ರಸ್ತೆ ಅಡಿಯಲ್ಲಿರುವ ಯುಜಿಡಿ ಪೈಪ್ ಲೈನ್ ಬಹಳ ಅಶಕ್ತವಾಗಿವೆ. ಇದ್ದಕ್ಕಿದ್ದಂತೆ ಬಾಯ್ತೆರೆದು ವಾಹನ ಸವಾರರನ್ನು ಬಲಿ ಪಡೆಯುತ್ತವೆ ಯುಜಿಡಿ ರಸ್ತೆ ಗುಂಡಿಗಳು.
Advertisement
ತುಮಕೂರು ನಗರದ ಶಿರಾಣಿ ರಸ್ತೆಯ ಮಾಕಂ ಕಲ್ಯಾಣ ಮಂಟಪದ ಎದುರಿನಲ್ಲೇ ಯುಜಿಡಿ ಕುಸಿದು ಬಿದ್ದಿದೆ. ಇದ್ರಿಂದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮೂರು ಮದುವೆಗಳು ಬೇರೊಂದು ಕಲ್ಯಾಣ ಮಂಟಪಕ್ಕೆ ಶಿಫ್ಟಾಗಿವೆ. ಹೀಗಾಗಿ ವಧು, ವರ ತಂದೆ ತಾಯಿಗಳು ಕಲ್ಯಾಣ ಮಂಟಪದ ಎದುರು ಮದುವೆ ಬೇರೊಂದು ಕಡೆಗೆ ವರ್ಗಾಯಿಸಲಾಗಿದೆ ಅಂತ ಬ್ಯಾನರ್ ಬರೆದು ಹಾಕಿದ್ದಾರೆ.
Advertisement
Advertisement
ಒಂದು ವಾರದ ಹಿಂದೆ ಯುಜಿಡಿ ಗುಂಡಿ ಕುಸಿದು ಬಿದ್ದು, ನಗರದ ಶೌಚಾಲಯದ ನೀರೆಲ್ಲಾ ಅಕ್ಕಪಕ್ಕದ ಕಲ್ಯಾಣ ಮಂಟಪ, ಅಂಗಡಿಗೆ ನುಗ್ಗಿದೆ. ಈ ಬಗ್ಗೆ ವಾರದ ಹಿಂದೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಬಳಿಕ ಜನ್ರು ರೊಚ್ಚಿಗೆದ್ದಿದ್ದರಿಂದ ಅಧಿಕಾರಿಗಳು ಇಂದು ಯುಜಿಡಿ ಮುಚ್ಚಲು ಮುಂದಾಗಿದ್ರು. ಆದ್ರೆ ಇಂದು ಬೆಳಗ್ಗೆ ಪೈಪ್ ತುಂಬಿಕೊಂಡು ಬಂದ ಲಾರಿಯೊಂದು ಕೂಡ ಕುಸಿದು ಬಿತ್ತು. ಇದ್ರಿಂದ ಅಕ್ಕಪಕ್ಕದ ರಸ್ತೆಗಳಲ್ಲೆಲ್ಲಾ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಎತ್ತಿ ಪೈಪ್ ಗಳನ್ನು ಪಕ್ಕಕ್ಕೆ ಜೋಡಿಸಲಾಗಿದೆ. ಪಾಲಿಕೆ ಅಧಿಕಾರಿಗಳು ವರ್ಷಕ್ಕೆ ಮೂರ್ನಾಲ್ಕು ಬಾರಿ ಇಂತಹ ಸರ್ಕಸ್ ಮಾಡಿ ಜನರಿಗೆ ಪುಕ್ಕಟ್ಟೆ ಮನೋರಂಜನೆ ನೀಡ್ತಾರೆ ಅಂತಾರೆ ಸ್ಥಳೀಯರು.
Advertisement
ಪ್ರತಿ ಬಾರಿಯೂ ಕಳಪೆ ಕಾಮಗಾರಿ ಮಾಡುವುದರಿಂದ ಪದೇ ಪದೇ ಯುಜಿಡಿ ಪೈಪ್ ಗಳು ರಸ್ತೆ ನಗರದಲ್ಲಿ ಎಲ್ಲೆಂದರಲ್ಲಿ ಕುಸಿಯುತ್ತಿವೆ. ದೂರದೃಷ್ಠಿಯ ಕೊರತೆ, ಕಮಿಷನ್ ಆಸೆಗೆ ಬಲಿಯಾಗುವ ಅಧಿಕಾರಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗುವುದಿಲ್ಲ. ಇದ್ರಿಂದ ಇಂತಹ ಅವಾಂತರಗಳು, ಅವಘಡಗಳು ತುಮಕೂರಿನಲ್ಲಿ ಸಾಮಾನ್ಯವಾಗಿವೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.