ಬೆಂಗಳೂರು: ಅಜಾಗರೂಕತೆಯಿಂದ ಲಾರಿ ಚಲಾಯಿಸಿ, ಓರ್ವನ ಬಲಿ ಪಡೆದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಜನವರಿ 19ರಂದು ರಾತ್ರಿ ಸುಮಾರು 7.45ಕ್ಕೆ ಹೊಸೂರು ಮುಖ್ಯರಸ್ತೆಯಲ್ಲಿ ಹೆಬ್ಬಗೋಡಿ ಕಡೆಯಿಂದ ಕೋನಪ್ಪನ ಅಗ್ರಹಾರ ಕಡೆಗೆ ಬರುವ ಮಾರ್ಗದಲ್ಲಿ ವೀರಸಂದ್ರ ಸಿಗ್ನಲ್ ಬಳಿ ಘಟನೆ ನಡೆದಿದ್ದು, ಬೈಕ್ ಹಿಂಬದಿ ಸವಾರ ಪಬನ್ ಠಾಕೂರ್ ಮೃತಪಟ್ಟಿದ್ದಾರೆ.
ವೇಗವಾಗಿ ಅಜಾಗರೂಕತೆಯಿಂದ ಲಾರಿ ಚಲಾಯಿಸಿಕೊಂಡು ಬಂದ ಚಾಲಕ ಬೈಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರರಾದ ಸನ್ನು ಪಾಠಕ್(26) ಹಾಗೂ ಹಿಂಬದಿ ಸವಾರ ಪಬನ್ ಠಾಕೂರ್ ಕೆಳಗೆ ಬಿದ್ದಿದ್ದಾರೆ. ಆಗ ಲಾರಿಯ ಬಲಭಾಗದ ಹಿಂದಿನ ಚಕ್ರ ಹಿಂಬದಿ ಸವಾರ ಪಬನ್ ಠಾಕೂರ್ ಸೊಂಟದ ಮೇಲೆ ಹರಿದು ಗಂಭೀರ ಗಾಯವಾಗಿತ್ತು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಠಾಕೂರ್ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.