ಬೆಂಗಳೂರು: ಟಿಪ್ಪರ್ ಲಾರಿ ಹಾಗೂ ಪಲ್ಸರ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಚಂದಾಪುರದ ದೊಮ್ಮಸಂದ್ರ ರಸ್ತೆಯ ಬಳಿಯ ನಾರಾಯಣಘಟ್ಟದಲ್ಲಿ ನಡೆದಿದೆ.
ಪಲ್ಸರ್ ಬೈಕ್ ಸವಾರ ಯಶವಂತ್ (20) ಮೃತಪಟ್ಟ ದುರ್ದೈವಿ. ಇಂದು ಮಧ್ಯಾಹ್ನ ಟಿಪ್ಪರ್ ಲಾರಿ ಚಾಲಕ ವೇಗವಾಗಿ ಬಂದು ಪಲ್ಸರ್ ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಯಶವಂತ್ ಸ್ಥಳದಲ್ಲೇ ಮೃತಪಟ್ಟರೇ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ನಂತರ ಚಾಲಕ ಟಿಪ್ಪರ್ ನ್ನು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯರು ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರ ಪ್ರಕಾರ ಲಾರಿ ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ಬೈಕ್ ಸವಾರ ದೊಮ್ಮಸಂದ್ರ ಸಮೀಪದ ಸೂಲಿಕುಂಟೆ ನಿವಾಸಿ ಹಾಗೂ ಹಿಂಬದಿ ಸವಾರ ಮಹದೇವಪುರ ಕ್ಷೇತ್ರದ ಪಣತ್ತೂರು ಗ್ರಾಮದ ನಿವಾಸಿ ಎಂಬುದು ತಿಳಿದು ಬಂದಿದೆ.
ಘಟನೆ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv