– ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಗೆಲುವಿನ ಹೊಸ್ತಿಲಲ್ಲಿ ಬಿಜೆಪಿ
ಲಕ್ನೋ: ಉತ್ತರ ಪ್ರದೇಶದ ಕುಂದರ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಹಿಂದೂ ಅಭ್ಯರ್ಥಿ, ಮುಸ್ಲಿಂ ಸಮುದಾಯದ 11 ಸ್ಪರ್ಧಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಬಾಹುಳ್ಯವಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ರಾಮ್‌ವೀರ್ ಠಾಕೂರ್ 98,000 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಅವರು ಗೆದ್ದರೆ, 30 ವರ್ಷಗಳ ಬಳಿಕ ಬಿಜೆಪಿ ಕ್ಷೇತ್ರವನ್ನು ಮರಳಿ ಪಡೆಯಲಿದೆ.
ಸಮಾಜವಾದಿ ಪಕ್ಷದ ಭದ್ರಕೋಟೆ ಕುಂದರ್ಕಿ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆ ಜೊತೆಗೆ ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಿತು.
ಠಾಕೂರ್ ವಿಜಯಶಾಲಿಯಾದರೆ, 30 ವರ್ಷಗಳ ನಂತರ ಈ ಸ್ಥಾನವನ್ನು ಗೆದ್ದ ಮೊದಲ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ. 1993 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಚಂದ್ರ ವಿಜಯ್ ಸಿಂಗ್ ಕೇಸರಿ ಪಕ್ಷಕ್ಕೆ ಜಯ ತಂದುಕೊಟ್ಟಿದ್ದರು. ಆಗ ಬಿಜೆಪಿ ಕೊನೆಯದಾಗಿ ಕುಂದರ್ಕಿ ಸ್ಥಾನವನ್ನು ಗೆದ್ದಿತ್ತು.
ಕುಂದರ್ಕಿಯಲ್ಲಿ ಬಿಜೆಪಿಯ ರಾಮ್‌ವೀರ್ ಠಾಕೂರ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಏಕೆಂದರೆ, ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಮೊಹಮ್ಮದ್ ರಿಜ್ವಾನ್‌ಗಿಂತ ದೊಡ್ಡ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಚಾಂದ್ ಬಾಬು, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್‌ನ ಮೊಹಮ್ಮದ್ ವರಿಶ್ ಮತ್ತು ಬಹುಜನ ಸಮಾಜ ಪಕ್ಷದ ರಫತುಲ್ಲಾ ಕೂಡ ಕಣದಲ್ಲಿದ್ದಾರೆ.
ಪಶ್ಚಿಮ UPಯ ಸಂಭಾಲ್ ಲೋಕಸಭಾ ಸ್ಥಾನದ ಭಾಗವಾಗಿರುವ ಕುಂದರ್ಕಿ, ಮುಸ್ಲಿಂ ಸಂಖ್ಯಾ ಬಾಹುಳ್ಯದ ಕ್ಷೇತ್ರ. ಅದರ ಜನಸಂಖ್ಯೆಯ 60% ಭಾಗ ಈ ಸಮುದಾಯದವರೇ ಇದ್ದಾರೆ.