ಚಂಡೀಗಢ: ಲಂಡನ್‍ನಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಮುಸ್ಲಿಂ ಮಹಿಳೆ ಹರ್ಯಾಣ ಅಭಿವೃದ್ಧಿಗೆ ಪಣತೊಟ್ಟಿದ್ದು, ಮುಸ್ಲಿಂ ಪ್ರಾಬಲ್ಯವುಳ್ಳ ಮೇವತ್ ಜಿಲ್ಲೆಯ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ನೌಕ್ಷಮ್ ಚೌಧರಿ(27) ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಚುನಾವಣಾ ಕಣಕ್ಕಿಳಿದಿದ್ದಾರೆ. ನೌಕ್ಷಮ್ ಅವರ ತಂದೆ ನಿವೃತ್ತ ನ್ಯಾಯಾಧೀಶರಾಗಿದ್ದು, ತಾಯಿ ಹರ್ಯಾಣ ತೆರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೌಕ್ಷಮ್ ಅವರು ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಇತಿಹಾಸ ವಿಷಯ ಸಂಬಂಧ ಪದವಿ ಮುಗಿಸಿದ್ದಾರೆ. ಬಳಿಕ ಇಟಲಿಯಲ್ಲಿ ಲಕ್ಷುರಿ ಬ್ರ್ಯಾಂಡ್ ನಿರ್ವಹಣೆ ಹಾಗೂ ಲಂಡನ್‍ನಲ್ಲಿ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.
Advertisement
Advertisement
ಕಳೆದ ಒಂದು ತಿಂಗಳ ಹಿಂದೆಯಷ್ಟೇ ನೌಕ್ಷಮ್ ಭಾರತಕ್ಕೆ ಹಿಂತಿರುಗಿದ್ದು, ಆಗಲೇ ಅ.21ಕ್ಕೆ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೊಂದಿರುವ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯ ಕಡಿಮೆಯಿದೆ. ಆದರೂ ಒಂದು ಮಹಿಳೆ ಧೈರ್ಯದಿಂದ ಬಿಜೆಪಿಯಿಂದಲೇ ಟಿಕೆಟ್ ಪಡೆದು, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಇಚ್ಛಿಸಿರುವುದು ಎಲ್ಲರ ಗಮನ ಸೆಳೆದಿದೆ.
Advertisement
Advertisement
2018ರ ನೀತಿ ಆಯೋಗದ ವರದಿ ಪ್ರಕಾರ, ಮೇವತ್ ಜಿಲ್ಲೆ ಭಾರತದಲ್ಲಿ ತೀವ್ರ ಹಿಂದುಳಿದ ಜಿಲ್ಲೆಯಾಗಿದೆ. ಯಾಕೆಂದರೆ ಇಲ್ಲಿ ರಸ್ತೆ, ಕಸ ವಿಲೇವಾರಿ ಹಾಗೂ ಇತರೆ ಮೂಲಭೂತ ಸೌಕರ್ಯವಿಲ್ಲ. ಅಲ್ಲದೆ ಇಲ್ಲಿನ ಮಹಿಳೆಯರು ಹಾಗೂ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಈ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಎಂದು ಘೋಷಿಸಲಾಗಿದೆ.
ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ, ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನೌಕ್ಷಮ್ ಇಲ್ಲಿ ಚುನಾವಣೆಗೆ ನಿಂತಿರುವುದಾಗಿ ಹೇಳಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ನಾನು ಇಲ್ಲಿ ಚುನಾವಣೆಗೆ ನಿಂತಿದ್ದೇನೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿ ಕಾರ್ಯ ಬೇಗನೆ ಆಗುತ್ತದೆ. ಆದ್ದರಿಂದ ಈ ಬಾರಿ ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನಾನು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹೆಸರು ಪಡೆದಿದ್ದೇನೆ. ವಿಶ್ವದ ಪ್ರತಿಷ್ಠಿತ ಬ್ರಾಂಡ್‍ಗಳಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ನನಗೆ ನನ್ನ ದೇಶ ಅಭಿವೃದ್ಧಿಗೊಳ್ಳಬೇಕು, ಹರ್ಯಾಣ ಅಭಿವೃದ್ಧಿಯಾಗಬೇಕು ಎಂಬ ಆಸೆ. ಆದ್ದರಿಂದ ಆದಾಯ ತರುವ ಕೆಲಸ ಬಿಟ್ಟು ಜನಸೇವೆ ಮಾಡಲು ಬಂದಿದ್ದೇನೆ ಎಂದು ನೌಕ್ಷಮ್ ತಿಳಿಸಿದ್ದಾರೆ.
ನೌಕ್ಷಮ್ ಅವರಿಗೆ ಪ್ರತಿಸ್ಪರ್ಧಿಯಾಗಿ 2009ರಲ್ಲಿ ಪುನ್ಹಾನ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಮೊಹಮದ್ ಲಿಯಾಸ್ ಚುನಾವಣೆಗೆ ನಿಂತಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಬೆಂಬಲಿಗರನ್ನು ಹೊಂದಿರುವ ವಿಶ್ವಾಸದಿಂದ ಲಿಯಾಸ್ ಅವರು ನೌಕ್ಷಮ್ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲವಿಲ್ಲ. ಇಲ್ಲಿ ಕಾಂಗ್ರೆಸ್ ಬೆಂಬಲ ಹೆಚ್ಚಿದೆ. ಈ ಬಾರಿ ನಾವೇ ಗೆಲ್ಲುತ್ತೇವೆ ಎಂದು ಲಿಯಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.