ಬೆಂಗಳೂರು: ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಮಾಜಿ ಸಚಿವ ಎ ಮಂಜು ಬಿಜೆಪಿಗೆ ಸೇರ್ಪಡೆ ಆಗಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಈಗಾಗಲೇ ಪ್ರಜ್ವಲ್ ಸ್ಪರ್ಧೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸುತ್ತಿರುವ ಮಂಜು ಅವರು ಇಂದು ನೀಡಿದ ಪ್ರತಿಕ್ರಿಯೆಯಿಂದ ಈ ಪ್ರಶ್ನೆ ಎದ್ದಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಈ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ. ಹೀಗಾಗಿ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದೇನೆ. ಇಲ್ಲ ಅಂದ್ರೆ ರಾಜಕಾರಣವೇನು ನಿಂತ ನೀರಲ್ಲ. ಬಳಿಕ ಆ ಯೋಚನೆ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಮ್ಮ ಹಿತೈಷಿಗಳು, ಕಾರ್ಯಕರ್ತರ ಜೊತೆ ಮಾತನಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಮ್ಮ ಕಾರ್ಯಕರ್ತರು ಹೇಳಿದ್ರೆ ಅದು ಪಕ್ಕಾ. ಬಿಜೆಪಿ ನಾಯಕರ ಜೊತೆ ಮಾತಾಡಿದ್ದೇನೆ. ಹಾಸನದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ದೇವೇಗೌಡರು ನಿಲ್ಲಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಪ್ರಜ್ವಲ್ ರೇವಣ್ಣ ನಿಂತ್ರೆ ನನ್ನ ಕಾರ್ಯಕರ್ತರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಂದು ಕಡೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ಅಡ್ಡಿಯಾದ್ರೆ ಮತ್ತೊಂದೆಡೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಕಾಂಗ್ರೆಸ್ ಮಾಜಿ ಸಚಿವ ಎ ಮಂಜು ಅಡ್ಡಿಯಾಗುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv\