ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಗೆ ಕೆಲವರನ್ನು ವಯಸ್ಸು, ಆರೋಗ್ಯ ಕಾರಣದಿಂದ ಬದಲಾವಣೆ ಮಾಡಲಾಗುತ್ತದೆ. ಬಹುತೇಕ ಚರ್ಚೆ ಒಂದು ಹಂತಕ್ಕೆ ಬಂದಿದ್ದು, ಗೊಂದಲ ಇರುವ ಕೆಲ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R. Ashok) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಲಾಯ್ತು. ದೆಹಲಿಗೆ ನಮ್ಮನ್ನ ನಮ್ಮ ರಾಷ್ಟ್ರೀಯ ನಾಯಕರು ಕರೆದಿದ್ರು. ರಾಜ್ಯದ ಲೋಕಸಭಾ ಚುನಾವಣೆ ತಯಾರಿ, ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆ ಮಾಡಿದ್ದಾರೆ. ಒಂದು ಸುತ್ತಿನ ಮಾತುಕತೆ ನಡೆದಿದೆ. ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಪಟ್ಟಿ ಬಗ್ಗೆ ಚರ್ಚೆ ಆಗಿದೆ. ಸವಿಸ್ತಾರವಾಗಿ ಅಮಿತ್ ಶಾ, ಜೆ.ಪಿ ನಡ್ಡಾ, ಸಂತೋಷ್ ಅವರ ಜೊತೆ ಚರ್ಚೆ ಆಗಿದೆ. ಅಭ್ಯರ್ಥಿಗಳ ಮಾಹಿತಿ, ಹಿನ್ನೆಲೆ ತಗೊಂಡಿದ್ದಾರೆ ಎಂದರು.
ಈ ಬಾರಿಯೂ ಅಚ್ಚರಿ ಮತ್ತು ಹೊಸಮುಖಗಳಿಗೆ ಟಿಕೆಟ್ (Loksabha Election 2024) ಸಿಗಬಹುದು. ಜೆಡಿಎಸ್ ಗೆ (JDS) ಯಾವುದೆಲ್ಲ ಕ್ಷೇತ್ರ ಬಿಟ್ಟು ಕೊಡಬೇಕು ಅಂತಾನೂ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರು ಅರೋಗ್ಯ ಸರಿ ಇಲ್ಲ ಅಂತ ಹೋಗಿಲ್ಲ. ಇನ್ನೊಂದೆರಡು ಮೂರು ದಿನಗಳಲ್ಲಿ ಕುಮಾರಸ್ವಾಮಿ ದೆಹಲಿಗೆ ಹೋಬಹುದು. ಹೈಕಮಾಂಡ್ ಜೊತೆ ಚರ್ಚೆ ನಡೆಸಿ ತೀರ್ಮಾನ ಮಾಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ರಾಜ್ಯದಿಂದ ಮೂರು ಹೆಸರುಗಳನ್ನು ಕಳಿಸಿದ್ದೇವೆ. ಸಂಸದೀಯ ಮಂಡಳಿ ಸಭೆ ನಂತರ ಪಟ್ಟಿ ಪ್ರಕಟ ಆಗಲಿದೆ. ಹೈಕಮಾಂಡ್ ನವರು ಮತ್ತೆ ಕರೆದರೆ ಹೋಗ್ತೀವಿ ಎಂದು ಹೇಳಿದರು.
ಮಂಡ್ಯದ ವಿಚಾರದಲ್ಲಿ ಏನೇ ತೀರ್ಮಾನ ಆದ್ರೂ ಬದ್ಧವಾಗಿದ್ದೇವೆ. ಮಂಡ್ಯದಲ್ಲಿ ನಮ್ಮ ಮತಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಜೆಡಿಎಸ್ ಕೂಡ ಪ್ರಬಲವಾಗಿದೆ. ಎರಡೂ ಪಕ್ಷಗಳ ಮತ ಕ್ರೋಢೀಕರಣವಾದ್ರೆ ಎನ್‍ಡಿಎ ಅಭ್ಯರ್ಥಿ ಗೆಲ್ತಾರೆ ಎಂದರು. ಇದನ್ನೂ ಓದಿ: ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣಕ್ಕೆ MP ಸುಮಲತಾ ತೀವ್ರ ವಿರೋಧ
ನಮ್ಮ ನಾಯಕ ಮೋದಿಯವರು. ಕಾಂಗ್ರೆಸ್ ಕ್ಯಾಪ್ಟನ್ ಯಾರು ಅಂತಾನೇ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಬರಗಾಲ ಬಗ್ಗೆ ಬೇಜವಾಬ್ದಾರಿತನ ತೋರುತ್ತಿದೆ. ಕೇಂದ್ರ ಬರ ಪರಿಹಾರ ಕೊಟ್ಟಿಲ್ಲ ಅಂತಾರೆ. ಈ ಕುರಿತು ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ಕೇಂದ್ರ ಯಾವಾಗ ಕೊಡಬೇಕೋ ಕೊಡುತ್ತೆ. ನೀವು ಮೊದಲು ನಿಮ್ಮ ಬದ್ಧತೆ ತೋರಿ. ರಾಜ್ಯದಿಂದಲೇ ಹಣ ಬಿಡುಗಡೆಗೊಳಿಸಿ ಪರಿಹಾರ ಕೆಲಸ ಮಾಡಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಆರ್‍ಎಸ್ ನೀರು ತಮಿಳುನಾಡಿಗೆ (Tamilnadu) ಹರಿಸಿದ್ದರಿಂದ ಸಮಸ್ಯೆ ಆಗಿದೆ. ಕೆಆರ್ ಎಸ್ ನಿಂದ ಐದು ಟಿಎಂಸಿ (TMC) ನೀರು ಹರಿದು ಹೋಗಿದೆ. ಬೆಂಗಳೂರು, ಮಂಡ್ಯ ಭಾಗದಲ್ಲಿ ಇದರಿಂದಲೇ ನೀರಿಗೆ ಹಾಹಾಕಾರ ಆಗಿದೆ. ಬರ ಎದುರಿಸಲು ಈ ಸರ್ಕಾರ ತಯಾರಿಯನ್ನೇ ಮಾಡಿಕೊಂಡಿಲ್ಲ. ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಇವರು ವಿಫಲರಾಗಿದ್ದಾರೆ. ಬರೀ ಸಭೆ ಮಾಡಿದರೆ ತಿಂಡಿ ಕಾಫಿ ಆಗುತ್ತೆ ಅಷ್ಟೇ. ಫೀಲ್ಡ್‍ನಲ್ಲಿ ಏನು ಮಾಡಬೇಕೋ ಮಾಡಿ, ಸಭೆ ಮಾಡಿದರೆ ಪ್ರಯೋಜನ ಏನೂ ಇಲ್ಲ. ಈ ಸರ್ಕಾರ ಸತ್ತು ಹೋಗಿದೆ, ನೀವು ಬದುಕಿದ್ರೆ ನೀರು ಕೊಡಿ. ಗ್ಯಾರಂಟಿಗಳು ವಿಫಲ ಆಗಿವೆ. ಗ್ಯಾರಂಟಿಗಳು ಸಕ್ಸಸ್ ಆಗಿದ್ರೆ, ಜನರಿಗೆ ಮುಟ್ಟಿದ್ರೆ ಜನ ಗುಳೇ ಹೋಗ್ತಿರೋದು ಯಾಕೆ?. ಗ್ಯಾರಂಟಿಗಳಿಂದ ಗುಳೇ ನಿಲ್ಲಿಸಲು ಆಗಿಲ್ಲ ಎಂದು ಕಿಡಿಕಾರಿದರು.