– ಪ್ರಧಾನಿ ಭೇಟಿ ಬೆನ್ನಲ್ಲೇ ಬಂಡಾಯದ ಬಿಸಿ
ಶಿವಮೊಗ್ಗ: ಕಲ್ಯಾಣ ಕರ್ನಾಟಕ ಕಲಬುರಗಿಗೆ ಶುಕ್ರವಾರ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸೋಮವಾರ ಮಲೆನಾಡಿನ ಜಿಲ್ಲೆ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಮೋದಿ ಭೇಟಿ ಬೆನ್ನಲ್ಲೇ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಂಡಾಯ ಎದ್ದಿರುವುದು ಬಿಜೆಪಿಗೆ ತಲೆ ನೋವಾಗಿದೆ.
Advertisement
ಹೌದು. ನರೇಂದ್ರ ಮೋದಿ ಅವರು ನಾಳೆ ವಿಶೇಷ ವಿಮಾನದ ಮೂಲಕ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದ (Shivamogga) ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಮೈದಾನಕ್ಕೆ ಆಗಮಿಸಲಿದ್ದಾರೆ. ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಸಮಾವೇಶದಲ್ಲಿ ಓಪನ್ ಜೀಪ್‍ನಲ್ಲಿ ವೇದಿಕೆಯತ್ತ ಬರಲು ವ್ಯವಸ್ಥೆ ಮಾಡಲಾಗಿದೆ. ಓಪನ್ ಸ್ಪೇಸ್ ಎಡ-ಬಲದಲ್ಲಿ ಕುಳಿತ ಕಾರ್ಯಕರ್ತರಿಗೆ ಮೋದಿ ಅವರು ಕೈಬೀಸಲು ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಮೋದಿ ಕಾರ್ಯಕ್ರಮಕ್ಕೆ ಶಿವಮೊಗ್ಗದ ಜೆಡಿಎಸ್‍ದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರಿಗೆ ಆಹ್ವಾನ ಸಹ ನೀಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ಬಿಜೆಪಿಯಲ್ಲಿ ತಣ್ಣಗಾಗದ ಬಂಡಾಯ- ಈಶ್ವರಪ್ಪ ಮನವೊಲಿಕೆ ಯತ್ನ ವಿಫಲ
Advertisement
Advertisement
ಶಿವಮೊಗ್ಗ ಸೇರಿದಂತೆ ಉಡುಪಿ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಒಟ್ಟು 4 ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ನಾಲ್ಕು ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ. ನಾಲ್ಕು ಕ್ಷೇತ್ರಗಳಲ್ಲಿ ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಆಗಿದೆ. ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಬಂಡಾಯ ಸಹ ತಲೆದೋರಿದೆ. ಚಿಕ್ಕಮಗಳೂರು ಹಾಗು ದಾವಣಗೆರೆಯಲ್ಲಿ ಅಭ್ಯರ್ಥಿ ಆಯ್ಕೆಗೆ ಬಂಡಾಯ ತಲೆದೋರಿದ್ದರೆ, ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ ಗೆ ಹಾವೇರಿ ಕ್ಷೇತ್ರದಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯದ ಬಾವುಟ ಹಾರಿಸಿದ್ದಾರೆ. ನಾಳೆವರೆಗೂ ಎಲ್ಲವೂ ಶಮನವಾಗಿ 4 ಕ್ಷೇತ್ರದ ಅಭ್ಯರ್ಥಿಗಳೊಂದಿಗೆ ಈಶ್ವರಪ ಸಹ ವೇದಿಕೆಗೆ ಬರಲಿದ್ದಾರೆಯೆಂದು ಎಂಎಲ್‍ಸಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಒಟ್ಟಾರೆ ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರಗಳಲ್ಲೇ ಬಂಡಾಯ ಬಿಸಿ ಜೋರಾಗಿದೆ. ಮೋದಿ ಅವರ ಭೇಟಿ ನಂತರ ಬಂಡಾಯ ಶಮನ ಆಗ್ತದಾ ಅಥವಾ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದಾ ಎಂಬುದನ್ನು ಕಾದು ನೋಡಬೇಕಿದೆ.