ಮೋದಿ ಇರೋವರೆಗೆ ಹಿಂದೂ ಧರ್ಮ, ಸನಾತನ ಧರ್ಮದ ನಾಶ ಅಸಾಧ್ಯ: ಪ್ರಧಾನಿ

Public TV
3 Min Read
MYSURU NARENDRA MODI 1

ಮೈಸೂರು: ಹಿಂದೂ ಧರ್ಮ ಹಾಗೂ ಸನಾತನ ಧರ್ಮದ ನಾಶವೇ ಕಾಂಗ್ರೆಸ್ ಉದ್ದೇಶ. ಎಲ್ಲಿಯವರೆಗೆ ಮೋದಿ ಇರುತ್ತಾರೋ ಇದು ಅಸಾಧ್ಯ. ಇದು ಮೋದಿ ಗ್ಯಾರಂಟಿ ಎಂದು ಪ್ರಧಾನಿ (Narendra Modi) ಹೇಳಿದರು.

ನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿ. ಇಲ್ಲಿನ ದಸರಾ ಇಡೀ ದೇಶಕ್ಕೆ ಪ್ರಖ್ಯಾತಿ. ತಾಯಿ ಚಾಮುಂಡಿ, ತಾಯಿ ಭುವನೇಶ್ವರಿ, ತಾಯಿ ಕಾವೇರಿ ಪಾದಕ್ಕೆ ನನ್ನ ಪ್ರಣಾಮಗಳು. ಸಂಸದೀಯ ಕ್ಷೇತ್ರದಲ್ಲಿ ದೇವೇಗೌಡರದ್ದು ಬಹಳ ದೊಡ್ಡ ಹೆಸರು. ಅವರಿಗೆ ನನ್ನ ನಮನಗಳು ಎಂದು ಪ್ರಧಾನಿ ಮಾತು ಆರಂಭಿಸಿದರು.

MYSURU NARENDRA MODI 4

ಬಿಜೆಪಿ ಸಂಕಲ್ಪ ಪತ್ರ ಮೋದಿ ಕೀ ಕಾ ಗ್ಯಾರಂಟಿಯಾಗಿದೆ. ಬಡವರಿಗೆ 3 ಕೋಟಿ ಮನೆ ನಿರ್ಮಾಣ ಮಾಡುತ್ತೇವೆ. ಉಚಿತ ಪಡಿತರ ವಿತರಣೆ ಮಾಡುತ್ತೇವೆ. ಆಯುಷ್ಮಾನ್ ಭಾರತ್ ಅಡಿ ಹಿರಿಯರಿಗೆ ಉಚಿತ ವೈದ್ಯಕೀಯ ಸೇವೆ ಎಂದು ಹೇಳುವ ಮೂಲಕ ಪ್ರಧಾನಿಯವರು ಬಿಜೆಪಿ ಸಂಕಲ್ಪ ಪತ್ರದ (BJP Manifesto) ಬಗ್ಗೆ ವಿವರಣೆ ನೀಡಿದರು.

ಕರ್ನಾಟಕ ಐಟಿ ಹಬ್ ಆಗಿದೆ. ಅದನ್ನು ಇನ್ನಷ್ಟು ವಿಸ್ತರಿಸುತ್ತೇವೆ. ಕನ್ನಡ ಸಮೃದ್ಧ ಭಾಷೆ. ಈ ಭಾಷೆಯ ವ್ಯಾಪ್ತಿಯನ್ನು ನಾವು ಇನ್ನಷ್ಟು ವಿಸ್ತರಣೆ ಮಾಡುತ್ತೇವೆ. ಸ್ಥಳೀಯ ಭಾಷೆಗಳ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಂಪಿ, ಬಾದಾಮಿ, ಮೈಸೂರು ವಿಶ್ವ ಪ್ರವಾಸೋದ್ಯಮ ನಕ್ಷೆಗೆ ತೆಗೆದು ಕೊಂಡು ಹೋಗುತ್ತೇವೆ ಎಂದರು.

ದೇವೇಗೌಡರ (HD Devegowda) ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಅವರ ಅನುಭವದ ಸಲಹೆ ಪಡೆಯುತ್ತೇವೆ. ನಿಮ್ಮ‌ ಒಂದು ಮತ ನನ್ನ ಶಕ್ತಿ ಹೆಚ್ಚಿಸುತ್ತದೆ. ದೇವೇಗೌಡರ ಮಾರ್ಗದರ್ಶನ, ಅನುಭವಿ ರಾಜಕಾರಣಿ ಯಡಿಯೂರಪ್ಪ (BS Yeddiyurappa), ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಸಹಯೋಗ ನಮ್ಮ ಶಕ್ತಿ ಹೆಚ್ಚಿಸಿದೆ. ಮೈಸೂರಿನಲ್ಲಿ ಶಕ್ತಿ ದೇವಿಯ ಆಶೀರ್ವಾದ ನಮಗೆ ಸಿಕ್ಕಿದೆ. ಇದು ಕರ್ನಾಟಕದ ಜನತೆಯ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಸುತ್ತೂರು ಮಠದ ಶ್ರೀಮಂತ ಪರಂಪರೆ ಇದೆ. ರಾಷ್ಟ್ರ ಕವಿ ಕುವೆಂಪು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಕೃಷ್ಣರಾಜ ಒಡೆಯರ್ ಅವರ ಕೆಲಸದ ಶ್ರೀಮಂತ ಪರಂಪರೆ ಇದೆ. ಕಾಂಗ್ರೆಸ್ ನ ಟುಕ್ಡೆ ಟುಕ್ಡೆ ಗ್ಯಾಂಗ್ ದೇಶ ಸುತ್ತುತ್ತಿದೆ. ಖತರ್ನಾಕ್ ಐಡಿಯಾದೊಂದಿಗೆ ದೇಶ ಸುತ್ತುತ್ತಿದೆ ಎಚ್ಚರಿಕೆ ಇರಲಿ. ಇಡೀ ದೇಶ ಕಾಂಗ್ರೆಸ್‌ ವಿರುದ್ಧ ಮಾತನಾಡುತ್ತಿದೆ. ಭಾರತ್‌ ಮಾತಾ ಕೀ ಜೈ ಎನ್ನಲು ಕಾಂಗ್ರೆಸ್‌ (Congress) ಅನುಮತಿ ಬೇಕಾ?. ದೇಶ ವಿರೋಧಿ ಕಾಂಗ್ರೆಸ್‌ ನಮಗೆ ಬೇಕಾ? ಎಂದು ಮೋದಿ ಹೇಳಿದರು.

MYSURU NARENDRA MODI 2

ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾರತ್ ಮಾತಾ ಕೀ ಜೈ ಅನ್ನಲು ಒಬ್ಬ ಮುಖಂಡ ತಮ್ಮ ನಾಯಕನ ಅನುಮತಿ ಕೇಳುತ್ತಾರೆ. ಇದು ಎಂತಹ ಸ್ಥಿತಿ. ಇಂತಹ ಕಾಂಗ್ರೆಸ್ ಗೆ ಮತ ಹಾಕ್ತೀರಾ?. ಕಾಂಗ್ರೆಸ್‌ನವರು ವಂದೇ ಮಾತರಂಗೆ ಮೊದಲು ವಿರೋಧ ಮಾಡಿದರು. ಈಗ ಭಾರತ್ ಮಾತಾಕಿ ಜೈ ಅನ್ನಲು ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಪತನಕ್ಕೆ ಇದು ಮುಖ್ಯ ಕಾರಣ. ನಾವು ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸ್ತಿದ್ದೇವೆ. ಆದರೆ ಕಾಂಗ್ರೆಸ್ ಇದಕ್ಕೆ ಸಾಕ್ಷಿ ಕೊಡಿ ಅಂತಾ ಕೇಳ್ತಿದೆ. ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿರುವವರಿಗೆ ಮತ ಹಾಕ್ತೀರಾ ಎಂದು ಮೋದಿ ಪ್ರಶ್ನಿಸಿದರು.

ರಾಮ ಮಂದಿರ (Ram Mandir) ಉದ್ಘಾಟನೆ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿತು,‌ ಕಾರ್ಯಕ್ರಮ ಬಹಿಷ್ಕರಿಸಿದರು. ಹಿಂದೂ ಧರ್ಮ ಹಾಗೂ ಸನಾತನ ಧರ್ಮದ ನಾಶವೇ ಕಾಂಗ್ರೆಸ್ ಉದ್ದೇಶ. ಎಲ್ಲಿಯವರೆಗೆ ಮೋದಿ ಇರುತ್ತಾರೋ ಇದು ಅಸಾಧ್ಯ. ಇದು ಮೋದಿ ಗ್ಯಾರಂಟಿ ಎಂದು ಹೇಳಿದರು.

MYSURU NARENDRA MODI 5

2024ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಕಾಂಗ್ರೆಸ್ ತನ್ನ 60 ವರ್ಷದ ರಿಪೋರ್ಟ್ ಕಾರ್ಡ್ ಯಾವತ್ತಾದರೂ ಕೊಟ್ಟಿದ್ಯಾ?. ನಾವು ನಮ್ಮ 10 ವರ್ಷದ ರಿಪೋರ್ಟ್ ಕೊಟ್ಟಿದ್ದೇವೆ. ಕಾಂಗ್ರೆಸ್ ಗೆ ಕರ್ನಾಟಕ ಸರ್ಕಾರ ಲೂಟಿಯ ಎಟಿಎಂ ಆಗಿದೆ. ರಾಜ್ಯದಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ನಡೆಯುತ್ತಿಲ್ಲ. ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ನೂರಾರು ಕೋಟಿ ಕಪ್ಪು ಹಣ ಕರ್ನಾಟಕದಿಂದ ದೇಶಕ್ಕೆ ಸರಬರಾಜು ಆಗ್ತಿದೆ. ಇಡೀ ಕರ್ನಾಟಕ ಮೋದಿ ಸರ್ಕಾರ ಎನ್ನುವಂತೆ ಕಾಂಗ್ರೆಸ್‌ ಮಾತಾಡುತ್ತಿದೆ ಎಂದು ಪ್ರಧಾನಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿಗಳನ್ನು ನಡೆಸಿದರು.

Share This Article